ಏರ್ ಫೋರ್ಸ್ ಒನ್:ಚೀನಾದ ಆಮದಿನ ಮೇಲೆ ವಿಧಿಸಲಾಗಿದ್ದ ಸುಂಕವನ್ನು ಕಡಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಮುಖಾಮುಖಿ ಭೇಟಿಯಾಗಿರುವುದು ಖುಷಿ ಕೊಟ್ಟಿದೆ ಎಂದಿರುವ ಅವರು, ಇದೊಂದು ಅದ್ಬುತ ಯಶಸ್ಸು ಎಂದು ಬಣ್ಣಿಸಿದ್ದಾರೆ. ಈ ಮಾತುಕತೆ ವೇಳೆ ಬೀಜಿಂಗ್ ಅಪರೂಪದ ಖನಿಜಗಳ ರಫ್ತಿಗೆ ಅವಕಾಶ ನೀಡುವುದಾಗಿ ಹಾಗೂ ಅಮೆರಿಕದ ಸೋಯಾಬೀನ್ ಖರೀದಿಗೆ ಸಮ್ಮತಿ ನೀಡಿದೆ ಎಂದು ವರದಿಯಾಗಿದೆ. ಏರ್ ಫೋರ್ಸ್ ಒನ್ ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಫೆಂಟನಿಲ್ ತಯಾರಿಸಲು ಬಳಸುವ ರಾಸಾಯನಿಕಗಳನ್ನು ಮಾರಾಟ ಮಾಡಿದ್ದಕ್ಕಾಗಿ ಚೀನಾದ ಮೇಲೆ ದಂಡನೆ ರೂಪದಲ್ಲಿ ಈ ವರ್ಷದ ಆರಂಭದಲ್ಲಿ ಜಾರಿಗೆ ತರಲಾದ ಸುಂಕಗಳನ್ನು ಶೇ 20ರಿಂದ 10ಕ್ಕೆಇಳಿಸಲಾಗುವುದು. ಇದು ಚೀನಾದ ಮೇಲಿನ ಒಟ್ಟು ಸುಂಕ ದರವನ್ನು ಶೇ 57ರಿಂದ 47ಕ್ಕೆ ಇಳಿಸಲಿದೆ ಎಂದು ತಿಳಿಸಿದ್ದಾರೆ.
ಇದೆ ವೇಳೆ, ಈ ಭೇಟಿಗೆ 0 ದಿಂದ 10ರೊಳಗೆ ರೇಟಿಂಗ್ ನೀಡುವುದಾದರೆ ನಾನು 12 ನೀಡುತ್ತೇನೆ. ನಾನು ಏಪ್ರಿಲ್‌ನಲ್ಲಿ ಚೀನಾಗೆ ಹೋಗುತ್ತೇನೆ. ತಮ್ಮನ್ನು ಭೇಟಿಯಾದ ಕೆಲ ದಿನದ ಬಳಿಕ ಕ್ಸಿ ಅಮೆರಿಕಕ್ಕೆ ಬರಲಿದ್ದಾರೆ. ನಾವು ಚೀನಾಕ್ಕೆ ಮತ್ತಷ್ಟು ಸುಧಾರಿತ ಚಿಪ್ಗಳನ್ನು ರಫ್ತು ಮಾಡುವ ಕುರಿತು ಮಾತುಕತೆ ನಡೆಸಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ. ಚೀನಾದ ಜೊತೆಗೆ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಿದ್ದು, ನಮಗೆ ಹೆಚ್ಚಿನ ಪ್ರಮುಖ ಅಡೆತಡೆಗಳಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಮುಂದುವರಿದ ಆತಂಕ: ದಕ್ಷಿಣ ಕೊರಿಯಾದಲ್ಲಿ ಕ್ಸಿ ಜೊತೆಗೆ ಟ್ರಂಪ್ 100 ನಿಮಿಷಗಳ ಮಾತುಕತೆ ಆಶಾದಾಯಕವಾಗಿದ್ದರೂ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವೆ ಪ್ರಮುಖ ಉದ್ವಿಗ್ನತೆಗಳು ಹಾಗೆ ಮುಂದುವರೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಎರಡೂ ರಾಷ್ಟ್ರಗಳು ಉತ್ಪಾದನೆಯಲ್ಲಿ ಪ್ರಬಲ ಸ್ಥಾನಗಳನ್ನು ಹುಡುಕುತ್ತಿದ್ದು, ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಟ್ರಂಪ್ ಸುಂಕ ಹೇರಿಕೆಯನ್ನು ಆಕ್ರಮಣಕಾರಿಯಾಗಿ ಬಳಕೆ ಮಾಡುತ್ತಿದ್ದು, ಇದನ್ನು ಚೀನಾದ ಅಪರೂಪದ ಲೋಹದ ರಫ್ತಿನ ಮೇಲೆ ಪ್ರತೀಕಾರದ ಮಿತಿಯಾಗಿ ಬಳಕೆ ಮಾಡಿದೆ. ಸಭೆಯಲ್ಲಿ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಟ್ಟಿಗೆ ಕೆಲಸ ಮಾಡುವ ಇಚ್ಛೆಯನ್ನು ಕ್ಸಿ ಜಿನ್ಪಿಂಗ್ ವ್ಯಕ್ತಪಡಿಸಿದ್ದಾರೆ. ಈ ವರ್ಷ ಚೀನಾ ಒಟ್ಟು ಶೇ 30ರಷ್ಟು ಹೊಸ ಸುಂಕಗಳನ್ನು ಎದುರಿಸಿತ್ತು.
ಅದರಲ್ಲಿ ಶೇ 20ರಷ್ಟು ಫೆಂಟನಿಲ್ ಉತ್ಪಾದನೆಗೆ ಸಂಬಂಧಿಸಿದೆ. ಆದರೆ, ಸುಂಕ ದರಗಳು ಅಸ್ಥಿರವಾಗಿವೆ. ಏಪ್ರಿಲ್‌ನಲ್ಲಿ ಟ್ರಂಪ್ ಚೀನೀ ಸರಕುಗಳ ಮೇಲಿನ ದರವನ್ನು ಶೇ 145ಕ್ಕೆ ಏರಿಸುವ ಯೋಜನೆಯನ್ನು ಘೋಷಿಸಿದ್ದರು. ಆದರೆ, ಇದು ಅಮೆರಿಕಕ್ಕೆ ತಲೆನೋವಾಗುತ್ತೆ ಎಂಬುದು ಅರಿಯುತ್ತಿದ್ದಂತೆ ಆ ಯೋಜನೆಗಳನ್ನು ಟ್ರಂಪ್ ಕೈಬಿಟ್ಟಿದ್ದರು. ಅಕ್ಟೋಬರ್ 10ರಂದು ಚೀನಾದ ಅಪರೂಪದ ಖನಿಜಗಳ ಮೇಲಿನ ನಿರ್ಬಂಧಗಳಿಂದಾಗಿ ಟ್ರಂಪ್ ಶೇ 100ರಷ್ಟು ಆಮದು ತೆರಿಗೆಯನ್ನು ವಿಧಿಸುವ ಬೆದರಿಕೆ ಹಾಕಿದ್ದರು.
ಹಿಂದಿನ ಸುಂಕಗಳನ್ನು ಒಳಗೊಂಡಂತೆ ಶೇ 47ರಷ್ಟು ಸುಂಕವು ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಟ್ರಂಪ್ ತಿಳಿಸಿದರು.








