ಜೈಪುರ(ರಾಜಸ್ಥಾನ):ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರು ಸಜೀವ ದಹನವಾದ ಘಟನೆಯ ನಡುವೆ, ರಾಜಸ್ಥಾನದಲ್ಲಿ ಇಂಥದ್ದೇ ಘಟನೆ ಇಂದು ನಡೆದಿದೆ. ಇಲ್ಲಿನ ಮನೋಹರ್‌ಪುರ ಪ್ರದೇಶದಲ್ಲಿ ಖಾಸಗಿ ಬಸ್‌ಗೆ ವಿದ್ಯುತ್ ತಂತಿ ತಗುಲಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಪಿಲಿಭಿತ್‌ನಿಂದ ತೆರಳಿದ್ದ ಬಸ್ ಮನೋಹರ್‌ಪುರದ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕರೆತರುತ್ತಿತ್ತು.
ಈ ವೇಳೆ ಮನೋಹರ್‌ಪುರದ ಹಳ್ಳಿಯೊಂದರ ಬಳಿ ಕಚ್ಚಾ ರಸ್ತೆಯಲ್ಲಿ ಸಾಗುತ್ತಿದ್ದಾಗ, ನೇತಾಡುತ್ತಿದ್ದ ವಿದ್ಯುತ್ ತಂತಿ ಬಸ್‌ನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳಿಗೆ ತಾಗಿದೆ. ಘರ್ಷಣೆಯಿಂದ ಹಠಾತ್ತನೇ ವಿದ್ಯುತ್ ಸ್ಪರ್ಶವಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ. ತಕ್ಷಣವೇ ಒಳಗಿದ್ದ ಕಾರ್ಮಿಕರು ಬಸ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಇಬ್ಬರು ಬೆಂಕಿ ಮತ್ತು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡ 10 ಮಂದಿ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿತು. ಗಾಯಾಳುಗಳಿಗೆ ಮೊದಲು ಶಹಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಗಂಭೀರ ಸುಟ್ಟ ಗಾಯಗಳಿಂದ ಬಳಲುತ್ತಿರುವ 6 ಮಂದಿಯನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಪ್ರೇಮ್ ಚಂದ್ ಬೈರ್ವಾ ಅವರು ಹೇಳಿದ್ದಾರೆ. ಕರ್ನೂಲ್ ದುರಂತ:ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಆಂಧ್ರಪ್ರದೇಶದ ಕರ್ನೂಲ್ ಬಳಿ ತೆರಳುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ಘರ್ಷಣೆಯಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ಇತ್ತೀಚೆಗೆ ನಡೆದಿದೆ.
ಘಟನೆಯಲ್ಲಿ 19 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಬಸ್ನಲ್ಲಿ ನೂರಾರು ಮೊಬೈಲ್ಗಳನ್ನು ಸಾಗಿಸಲಾಗುತ್ತಿತ್ತು. ಎಲ್ಲವೂ ಸ್ಫೋಟಗೊಂಡಿದ್ದರಿಂದ ಬೆಂಕಿ ಮತ್ತಷ್ಟು ವ್ಯಾಪಿಸಲು ಕಾರಣವಾಗಿದೆ ಎಂದು ತನಿಖೆ ನಡೆಸುತ್ತಿರುವ ವಿಧಿ ವಿಜ್ಞಾನ ತಂಡ ತಿಳಿಸಿದೆ. ತನಿಖಾಧಿಕಾರಿಗಳ ಪ್ರಕಾರ, ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ತಕ್ಷಣ, ಪೆಟ್ರೋಲ್ ಸೋರಿಕೆಯಾಗಿದೆ. ಜೊತೆಗೆ, ಬೈಕ್ ಬಸ್ಸಿನ ಅಡಿ ಸಿಲುಕಿಕೊಂಡಿತು.
ಬಸ್ ಅದನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಯಿತು. ಘರ್ಷಣೆಯಿಂದ ಬೆಂಕಿ ಹೊತ್ತಿಕೊಡಿದೆ ಎಂದು ತಿಳಿಸಿದ್ದಾರೆ. ಇವುಗಳನ್ನೂ ಓದಿ:.








