ಬೆಂಗಳೂರು: ಯುನೈಟೆಡ್ ಬ್ರಿವರಿಸ್ ಹೋಲ್ಡಿಂಗ್ ಲಿಮಿಟೆಡ್ (ಯುಬಿಎಚ್ಎಲ್) ಒಡೆತನದಲ್ಲಿದ್ದ ಹಿಂದಿನ ಕಿಂಗ್ ಫಿಷರ್ ಏರ್ಲೈನ್ಸ್ನಲ್ಲಿ ತಾನು ಹಾಗೂ ತನ್ನ ಕಂಪನಿ ಉಳಿಸಿಕೊಂಡಿರುವ ಸಾಲದ ಬಗ್ಗೆ ಮಾಹಿತಿ ನೀಡುವಂತೆ ಅಬಕಾರಿ ಉದ್ಯಮಿ ಹಾಗೂ ದೇಶ ತೊರೆದಿರುವ ಘೋಷಿತ ಅಪರಾಧಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ಸಿಂಧುವಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟೆ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರು ಬೇಕಿದ್ದರೆ ಕಂಪನಿ ನ್ಯಾಯಾಧಿಕರಣದ ಮುಂದೆ ತಮ್ಮ ಮನವಿಯನ್ನು ಅರ್ಜಿಯ ಮೂಲಕ ಸಲ್ಲಿಸಬಹುದಾಗಿದೆ ಎಂದು ಪೀಠ ಹೇಳಿದೆ. ವಿಚಾರಣೆ ವೇಳೆ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಈ (ಹೈಕೋರ್ಟ್) ನ್ಯಾಯಾಲಯದ ಮುಂದೆ ಈ ಅರ್ಜಿಯನ್ನು ಹೇಗೆ ನಿರ್ವಹಿಸಬಹುದು? ಈ ನ್ಯಾಯಾಲಯ ಇದನ್ನೆಲ್ಲಾ ಏಕೆ ಪರಿಗಣಿಸಬೇಕು? ನೀವು ಈ ಎಲ್ಲಾ ವಿವರಗಳನ್ನು ಪಡೆಯಲು ಆಸಕ್ತಿ ಹೊಂದಿದ್ದರೆ ಕಂಪನಿ ನ್ಯಾಯಾಲಯದ ಮುಂದಿರುವ ಅರ್ಜಿಗಳಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು. ಆದರೆ ಮೇಲ್ನೋಟಕ್ಕೆ ನಿಮ್ಮ ಈ ಮನವಿಗಳನ್ನು ಇಲ್ಲಿ ಒಪ್ಪಲು ಸಾಧ್ಯವೇ ಇಲ್ಲ ಎಂದು ಪೀಠ ಹೇಳಿದೆ. ಮಲ್ಯ ಅವರು ತಮ್ಮಿಂದ ಕಾಲಕಾಲಕ್ಕೆ ಮಾಡಲಾದ ಎಲ್ಲಾ ವಸೂಲಾತಿಗಳನ್ನು ಸರಿಹೊಂದಿಸಿದ ನಂತರ ಬ್ಯಾಂಕ್ ಖಾತೆಗಳ ಲೆಕ್ಕ ಪತ್ರಗಳನ್ನು ಕೋರಿದ್ದಾರೆ.
ಅಲ್ಲದೇ, ಕಿಂಗ್ ಫಿಷರ್ ಏರ್ಲೈನ್ಸ್ ಮುಚ್ಚಿದ ನಂತರ, 6,200 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸಲು ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೂ ಬ್ಯಾಂಕುಗಳು ತಮ್ಮಿಂದ 14,000 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿವೆ ಎಂಬುದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸಿತಾರಾಮನ್ ಸದನಕ್ಕೆ ಮಾಹಿತಿ ನೀಡಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು. ಬ್ಯಾಂಕುಗಳ ಪರವಾಗಿ ಹಾಜರಾದ ಹಿರಿಯ ವಕೀಲ ವಿಕ್ರಮ್ ಹುಯಿಲ್ಗೋಳ್, ಕಂಪನಿ ನ್ಯಾಯಾಲಯದಲ್ಲಿ ದಿವಾಳಿ ಪ್ರಕ್ರಿಯೆಗಳು ನಡೆಯುತ್ತಿವೆ. ಮತ್ತು ಅವರು ಏನೇ ಮಾಹಿತಿ ಬೇಕಿದ್ದರೂ ಅಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೇ, ಈ ಅರ್ಜಿಯು ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸುವ ಅರ್ಜಿಯ ಸ್ವರೂಪದಲ್ಲಿದೆ.
ಅವರು ಎಷ್ಟು ವಸೂಲಿ ಮಾಡಲಾಗಿದೆ ಮತ್ತು ಎಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಬ್ಯಾಂಕಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಆದರೆ, ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಾಗದು ಎಂದು ಪೀಠಕ್ಕೆ ತಿಳಿಸಿದರು. ಕಂಪನಿಗೆ ನೇಮಕವಾಗಿರುವ ಅಧಿಕೃತ ಲಿಕ್ವಿಡೇಟರ್ ಪರ ಹಾಜರಾದ ವಕೀಲರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿವರಗಳನ್ನು ಕೋರಿ ಕಂಪನಿ ನ್ಯಾಯಾಲಯದಲ್ಲಿ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅವರು ಈಗಾಗಲೇ ಕೆಲವು ವಿವರಗಳನ್ನು ಒದಗಿಸಿದ್ದಾರೆ. ನಾವು ಮಾಜಿ ನಿರ್ದೇಶಕರ ವಿರುದ್ಧ ವಂಚನೆ ಪ್ರಕರಣವನ್ನು ಸಲ್ಲಿಸಿದ್ದೇವೆ.
ಇವರು (ಮಲ್ಯ) ಮಾಜಿ ನಿರ್ದೇಶಕರಾಗಿದ್ದು, ಅವರ ವಿರುದ್ಧ ನಾನು 17,000 ಕೋಟಿ ವಂಚನೆ ಪ್ರಕರಣ ಸಲ್ಲಿಸಲಾಗಿದೆ. ಹಾಗಾಗಿ ಅವರು ಸ್ವತಃ ಈ ಅರ್ಜಿಯನ್ನು ಸಲ್ಲಿಸಲು ಯಾವುದೇ ಅರ್ಹತೆ ಇಲ್ಲ ಎಂದು ಪೀಠಕ್ಕೆ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಪೀಠ, ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿತು.








