ಒಪ್ಪಿತ ಸಂಬಂಧಗಳನ್ನು ಅತ್ಯಾಚಾರ ಎಂದು ಅಪರಾಧಿಕರಿಸಲು ಸಾಧ್ಯವಿಲ್ಲ: ಹೈಕೋರ್ಟ್

ಒಪ್ಪಿತ ಸಂಬಂಧಗಳನ್ನು ಅತ್ಯಾಚಾರ ಎಂದು ಅಪರಾಧಿಕರಿಸಲು ಸಾಧ್ಯವಿಲ್ಲ: ಹೈಕೋರ್ಟ್
By Published : October 29, 2025 at 5:36 PM IST

ಬೆಂಗಳೂರು:ಪರಸ್ಪರ ಒಪ್ಪಿತವಾಗಿ ನಡೆಸಿದ ಲೈಂಗಿಕ ಸಂಬಂಧಗಳನ್ನು ಅತ್ಯಾಚಾರ ಎಂಬುದಾಗಿ ಅಪರಾಧಿಕರಿಸಲು ಸಾಧ್ಯವಿಲ್ಲ. ಹಲವು ವರ್ಷಗಳ ಕಾಲ ಪರಸ್ಪರ ಮುಂದುವರೆದಿದ್ದ ಸಂಬಂಧ ವಿಫಲವಾದ ಮಾತ್ರಕ್ಕೆ ಇದನ್ನು ಆರೋಪವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ತಿಳಿಸಿದೆ. ವಿವಾಹವಾಗಿ ಮೂರು ಮಕ್ಕಳಿರುವ ಮಹಿಳೆಯೊಬ್ಬರು, ತನ್ನನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದಲ್ಲಿ ಪೊಲೀಸ್ ಕಾನ್ಸ್​ಟೇಬಲ್​ ವಿರುದ್ಧ ದಾಖಲಿಸಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ರದ್ದುಪಡಿಸಿ ನ್ಯಾಯಾಲಯ ಆದೇಶ ಪ್ರಕಟಿಸಿದೆ. ತಮ್ಮ ವಿರುದ್ಧ ಅತ್ಯಾಚಾರ ಆರೋಪ ಕುರಿತು ದಾಖಲಾಗಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಆರೋಪ ಪಟ್ಟಿ ರದ್ದು ಕೋರಿ ಪೊಲೀಸ್ ಕಾನ್ಸ್​ಟೇಬಲ್ ಫಕೀರಪ್ಪ ಹಟ್ಟಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು, ದೂರುದಾರರೊಂದಿಗೆ ಮೂರು ವರ್ಷಗಳ ಕಾಲ ಸಹವಾಸ, ನಿರಂತರ ಒಡನಾಟ ಹೊಂದಿರುವುದು ಮತ್ತು ಪ್ರೀತಿಯ ಬಂಧನ ಮತ್ತು ಒಪ್ಪಿಗೆಯ ಲೈಂಗಿಕ ಸಂಬಂಧ ಬೆಳೆಸಿರುವುದು ಕಂಡುಬಂದಿದೆ. ಅಲ್ಲದೆ, ಇಬ್ಬರ ನಡುವಿನ ಕೃತ್ಯ ಒಪ್ಪಿಗೆಯಿಂದ ನಡೆದಿದ್ದು, ವಿವಾಹದ ಸುಳ್ಳು ಭರವಸೆಯ ಉಲ್ಲಂಘನೆ ಅತ್ಯಾಚಾರಕ್ಕೆ ಕಾರಣವಾಗುವುದಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಸ್ಪಷ್ಟಪಡಿದೆ ಎಂಬ ತೀರ್ಪನ್ನು ಉಲ್ಲೇಖಿಸಿ ನ್ಯಾಯಪೀಠ ತಿಳಿಸಿದೆ. ಮಹಿಳೆ ಈಗಾಗಲೇ ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿದ್ದರು. ಮತ್ತೆ ಮದುವೆಯಾಗುವುದಾಗಿ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ ದೂರುದಾರ ಮಹಿಳೆ ಆರೋಪಿಸಿದ್ದಾರೆ. ವಿವಾಹಿತ ಮಹಿಳೆಯ ಈ ಆರೋಪ ಮದುವೆಯಾಗುವ ಭರವಸೆಯ ಕಲ್ಪನೆಯನ್ನು ನಂಬಲಾಗದು.

ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣದ ವಿಚಾರಣೆ ಮುಂದುವರೆಸಲು ಅವಕಾಶ ನೀಡಿದಲ್ಲಿ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ. ಪ್ರಕರಣದ ಹಿನ್ನೆಲೆ: ದೂರುದಾರ ಮಹಿಳೆ ವಾಸವಿದ್ದ ಮನೆಗೆ ಮುಂಗಡವಾಗಿ ಪಾವತಿಸಿದ್ದ ಹಣ ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ತಕರಾರು ಉಂಟಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅರ್ಜಿದಾರ ಪೊಲೀಸ್ ಕಾನ್ಸ್​ಟೇಬಲ್ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಕರೆ ಮಾಡಿ ಮಾತನಾಡುವುದಕ್ಕೆ ಪ್ರಾರಂಭಿಸಿ, ಅಗತ್ಯವಿದ್ದಲ್ಲಿ ಠಾಣೆಗೆ ಬರುವಂತೆ ಸೂಚನೆ ನೀಡಿದ್ದರು. ಬಳಿಕ ಪರಸ್ಪರ ಸಲುಗೆ ಬೆಳೆದು 3 ವರ್ಷಗಳ ಕಾಲ ಒಪ್ಪಿತ ಲೈಂಗಿಕ ಕ್ರಿಯೆ ಮುಂದುವರೆದಿತ್ತು.

ಈ ಆರೋಪ ಸಂಬಂಧ ದೂರುದಾರರು ಪೊಲೀಸ್ ಠಾಣೆಗೆ ದೂರು ನೀಡುವ ಬದಲಾಗಿ ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಹದೇವಪುರ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು. ತನಿಖೆ ನಡೆಸಿದ್ದ ಮಹದೇವಪುರ ಪೊಲೀಸರು, ಅರ್ಜಿದಾರ ಆರೋಪಿ ವಿರುದ್ಧ ಐಪಿಸಿ 376(ಅತ್ಯಾಚಾರ) ಅಡಿಯಲ್ಲಿ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೂರುದಾರರು ಮತ್ತು ಅರ್ಜಿದಾರ ಆರೋಪಿ ಮಧ್ಯೆ ಒಪ್ಪಿಗೆಯಿಂದ ನಡೆದ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂಬುದಾಗಿ ಬಿಂಬಿಸಲಾಗುತ್ತಿದೆ.

ದೂರುದಾರರು ವಿವಾಹಿತರಾಗಿ ಮೂವರು ಮಕ್ಕಳಾಗಿದ್ದರೂ, ಮದುವೆಯಾಗುವುದಾಗಿ ಭರವಸೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಇಬ್ಬರ ನಡುವೆ 3 ವರ್ಷಗಳ ಕಾಲ ಸಂಬಂಧ ಮುಂದುವರೆದಿದ್ದು, ಅರ್ಜಿದಾರರ ಕುಟುಂಬಸ್ಥರು ಅವರಿಗೆ ಮದುವೆ ಮಾಡುವುದಕ್ಕೆ ಮುಂದಾದ ಸಂದರ್ಭದಲ್ಲಿ ಈ ದೂರನ್ನು ದಾಖಲಿಸಲಾಗಿದೆ. ಹೀಗಾಗಿ ದೂರು ಮತ್ತು ಆರೋಪಪಟ್ಟಿಯನ್ನು ರದ್ದುಮಾಡಬೇಕು ಎಂದು ಕೋರಿದರು. ದೂರುದಾರರ ಪರ ವಕೀಲರು, ಅರ್ಜಿದಾರರು ದೂರುದಾರರನ್ನು ಮದುವೆಯಾಗುವುದಾಗಿ ಮತ್ತು ಮಕ್ಕಳನ್ನು ಸಹ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದೇ ಕಾರಣದಿಂದ ದೂರುದಾರರು ಅರ್ಜಿದಾರರೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಿದ್ದಾರೆ.

ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.

📚 Related News