ಬೆಂಗಳೂರು:ಐಷಾರಾಮಿ ಜೀವನ ನಡೆಸಲು ದುಬಾರಿ ಬೆಲೆಯ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನ ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಕ್ಕಿಂ ಮೂಲದ ದಿವಾಸ್ ಕಮಿ (22), ಆರೋಹನ್ ಥಾಪಾ (28) ಹಾಗೂ ನೇಪಾಳ ಮೂಲದ ಆಸ್ಮಿತಾ (24) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 40 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 39 ಮೊಬೈಲ್ ಫೋನ್‌ಗಳು, 1 ಡಿಜಿಟಲ್ ವಾಚ್, 1 ಡಿಜಿಟಲ್ ಕ್ಯಾಮೆರಾ ವಶಕ್ಕೆ ಪಡೆದಿರುವುದಾಗಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಕೆ. ಪರಶುರಾಮ ತಿಳಿಸಿದರು. ಪತಿಯನ್ನು ತೊರೆದಿದ್ದ ಆಸ್ಮಿತಾ, ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ದಿವಾಸ್ ಕಮಿ ಜೊತೆ ಲಿವ್ ಇನ್ ಸಂಬಂಧದಲ್ಲಿ ವಾಸವಿದ್ದಳು.
ದಿವಾಸ್ ಕಮಿ ಹಾಗೂ ಆರೋಹನ್ ಥಾಪಾ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದರು. ಆಸ್ಮಿತಾಳ ಜೊತೆ ಐಷಾರಾಮಿ ಜೀವನ ನಡೆಸಲು ಸ್ನೇಹಿತ ಆರೋಹನ್ ಥಾಪಾ ಜೊತೆ ಸೇರಿ ದಿವಾಸ್ ಕಮಿ ದುಬಾರಿ ಮೊಬೈಲ್‌ಗಳನ್ನು ಕದಿಯುತ್ತಿದ್ದ. ಬಳಿಕ ಅವುಗಳನ್ನು ಆಸ್ಮಿತಾಳ ಮೂಲಕ ಆರೋಪಿಗಳಿಬ್ಬರೂ ಮಾರಾಟ ಮಾಡಿಸುತ್ತಿದ್ದರು. ಕಳೆದ ವಾರ ಒಂದೇ ರಾತ್ರಿ ಬೆಳ್ಳಂದೂರು ಹಾಗೂ ವರ್ತೂರು ಠಾಣೆಗಳ ವ್ಯಾಪ್ತಿಯಗಳಲ್ಲಿರುವ ಎರಡು ಶೋ ರೂಮ್‌ಗಳ ಶಟರ್ ಬೀಗ ಮುರಿದು ಒಳನುಗ್ಗಿದ್ದ ಆರೋಪಿಗಳು ಮೊಬೈಲ್ ಫೋನ್‌ಗಳನ್ನು ದೋಚಿ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಪರಾರಿಯಾಗಿದ್ದರು ಎಂದು ಮಾಹಿತಿ ನೀಡಿದರು. ದಿವಾಸ್ ಕಮಿ ವಿರುದ್ಧ ಸಿಕ್ಕಿಂನಲ್ಲಿ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಒಂದು ಪ್ರಕರಣ ಹಾಗೂ ವೈಟ್‌ಫೀಲ್ಡ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು.
ಆರೋಹನ್ ಥಾಪಾ ವಿರುದ್ಧ ವೈಟ್‌ಫೀಲ್ಡ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆರೋಪಿಗಳು ಬೆಳ್ಳಂದೂರು ವ್ಯಾಪ್ತಿಯಲ್ಲಿ 22 ಹಾಗೂ ವರ್ತೂರು ವ್ಯಾಪ್ತಿಯಲ್ಲಿ 14 ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡಿದ್ದರು. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಖರೀದಿಸಿದ್ದ ಚಿನ್ನವನ್ನೂ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನು ಓದಿ: ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ರಾಜಸ್ಥಾನ ಮೂಲದ ಅಂತರ್ ರಾಜ್ಯ ಕಳ್ಳರನ್ನು ದಾವಣಗೆರೆಯ ವಿದ್ಯಾನಗರ ಠಾಣೆಯ ಪೊಲೀಸರು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಿದ್ದರು. ಶ್ಯಾಮ್ ಸಿಂಗ್ (28), ಕವರ್ ಪಾಲ್(24), ಪ್ರತಾಪ್ ಸಿಂಗ್ (33) ಬಂಧಿತರಾಗಿದ್ದು, ಇವರಿಂದ 15,37,800 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ಪ್ರಕಟಣೆಯ ಮೂಲಕ ತಿಳಿಸಿದ್ದರು.
ವಿದ್ಯಾನಗರದ ನಿವಾಸಿ ರಂಗನಾಥ ಎಂಬುವರ ಮನೆಯಲ್ಲಿ ಜನವರಿ 09 2025 ರಂದು ಮಧ್ಯಾಹ್ನ ಕಳ್ಳತನ ಆಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಮೂರು ಜನ ಅಂತಾರಾಜ್ಯ ಕಳ್ಳರನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಿದ್ದಾರೆ.








