ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ರೈಲು ಸೇವೆಯಲ್ಲಿ ವ್ಯತ್ಯಯ

ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ರೈಲು ಸೇವೆಯಲ್ಲಿ ವ್ಯತ್ಯಯ
By Published : October 30, 2025 at 12:32 PM IST

ಬೆಂಗಳೂರು:ನಗರದ ಜೀವನಾಡಿ ಎನಿಸಿರುವ ನಮ್ಮ‌ ಮೆಟ್ರೋದ ನೇರಳೆ ಮಾರ್ಗದ ಸೇವೆಯಲ್ಲಿ ಗುರುವಾರ ಬೆಳಗ್ಗೆ ತಾಂತ್ರಿಕ ಸಮಸ್ಯೆಯುಂಟಾದ ಪರಿಣಾಮ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುವಂತಾಯಿತು. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ರೈಲೊಂದು ಸುಮಾರು 10 ನಿಮಿಷಗಳ ಕಾಲ ನಿಂತಿತ್ತು. ಇದರಿಂದಾಗಿ ಇತರ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿ ರೈಲು ಸೇವೆ ವಿಳಂಬವಾಯಿತು. ಕಲವೇ ನಿಮಿಷಗಳ ಅಂತರದಲ್ಲಿ ವಿಜಯನಗರ ನಿಲ್ದಾಣದಲ್ಲಿಯೂ ಮತ್ತೊಂದು ರೈಲು ತಾಂತ್ರಿಕ ಸಮಸ್ಯೆಯಿಂದ ನಿಂತಿತು. ಅರ್ಧ ಗಂಟೆಯಾದರೂ ಸಮಸ್ಯೆ ಬಗೆಹರಿಯದ ಪರಿಣಾಮ ಬೆಳಗಿನ ಪೀಕ್ ಅವರ್‌ನಲ್ಲಿ ಪ್ರಯಾಣಿಕರು ನಿಲ್ದಾಣಗಳಲ್ಲೇ ಕಾದು ನಿಲ್ಲುವಂತಾಯಿತು.

ವಿಜಯನಗರ ಮತ್ತು ಹೊಸಹಳ್ಳಿ ನಡುವಿನ ಮಾರ್ಗದಲ್ಲಿ ಬೆಳಗ್ಗೆ 9:15ಕ್ಕೆನಿಂತಿದ್ದ ರೈಲಿನಲ್ಲಿ ತಾಂತ್ರಿಕ ಸಮಸ್ಯೆಯುಂಟಾದ ಪರಿಣಾಮ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಚಲ್ಲಘಟ್ಟ ನಡುವಿನ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಇದರಿಂದಾಗಿ ಹಸಿರು ಮಾರ್ಗದಲ್ಲಿ ರೈಲು ಸೇವೆಗಳನ್ನ ಸಹ ನಿಯಂತ್ರಿಸಲಾಯಿತು. ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆಯವರೆಗಿನ ಸೇವೆಗಳು ಬೆಳಗ್ಗೆ 10:15ರಿಂದ ಸಾಮಾನ್ಯಗೊಳಿಸಲಾಗಿದೆ. ಮೈಸೂರು ರಸ್ತೆ ಮತ್ತು ಚೆಲ್ಲಘಟ್ಟ ನಡುವಿನ ಸೇವೆಗಳನ್ನು ಸರಿಪಡಿಸುವ ನಿರೀಕ್ಷೆಯಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ದಯವಿಟ್ಟು ಮುಂದಿನ ಸೂಚನೆಗಾಗಿ ನಿರೀಕ್ಷಿಸಿ ಎಂದು ಮನವಿ ಮಾಡಲಾಗಿತ್ತು. ಇತ್ತೀಚೆಗಷ್ಟೇ (ಅ. 12) ತಾಂತ್ರಿಕ ದೋಷದಿಂದ ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲು ಸೇವೆಯಲ್ಲೂ ವ್ಯತ್ಯಯ ಕಂಡು ಬಂದಿತ್ತು. ಬಳಿಕ ತಾಂತ್ರಿಕ ದೋಷ ಸರಿಪಡಿಸಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಸಾಮಾಜಿಕ ಜಾಲತಾಣ ಎಕ್ಸ್​ ಪೋಸ್ಟ್​ನಲ್ಲಿ ಮನವಿ ಮಾಡಿದ್ದರು.

ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ರೈಲುಗಳು ವೇಳಾಪಟ್ಟಿಯಂತೆ ಚಲಿಸುತ್ತಿವೆ. ಪ್ರಯಾಣಿಕರು ದಯವಿಟ್ಟು ಇದನ್ನು ಗಮನಿಸಿ ಮೆಟ್ರೋ ಸೇವೆಯನ್ನು ಬಳಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಮನವಿ ಮಾಡಿದ್ದರು. ಇದಕ್ಕೂ ಮುನ್ನ ನೇರಳೆ ಮಾರ್ಗದಲ್ಲಿನ ವೈಟ್‌ಫೀಲ್ಡ್​ (ಕಾಡುಗೋಡಿ) ಮೆಟ್ರೋ ನಿಲ್ದಾಣದಲ್ಲಿಯೂ ತಾಂತ್ರಿಕ ದೋಷ ಕಂಡು ಬಂದಿತ್ತು. ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದಲ್ಲಿ ಕಂಡುಬಂದಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಿರುವ ಬಗ್ಗೆ ಬಿಎಂಆರ್‌ಸಿಎಲ್‌ ತನ್ನ ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿತ್ತು.

📚 Related News