ಮೈಸೂರು: ಗಂಡನನ್ನು ಮುಗಿಸಲು ಪ್ಲಾನ್​ ಮಾಡಿ ಸಿಕ್ಕಿಬಿದ್ದ ಪತ್ನಿ ಸೇರಿ ನಾಲ್ವರ ಬಂಧನ

ಮೈಸೂರು: ಗಂಡನನ್ನು ಮುಗಿಸಲು ಪ್ಲಾನ್​ ಮಾಡಿ ಸಿಕ್ಕಿಬಿದ್ದ ಪತ್ನಿ ಸೇರಿ ನಾಲ್ವರ ಬಂಧನ
By Published : October 30, 2025 at 2:46 PM IST

ಮೈಸೂರು:ಸಂಸಾರದಲ್ಲಿ ಕಲಹ ಉಂಟಾದ ಹಿನ್ನೆಲೆ ಗಂಡನನ್ನೇ ಕೊಲೆ ಮಾಡಲು ಪ್ಲಾನ್‌ ಹಾಕಿ ವಿಫಲವಾದ್ದರಿಂದಾಗಿ ಹೆಂಡತಿ ಸೇರಿ 4 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ನಂಜನಗೂಡು ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಿಲಾಡಿ ಪತ್ನಿ ಅಂದರ್ ಆಗಿದ್ದಾರೆ. ಪತಿಯನ್ನ ಮುಗಿಸಲು ಸಹೋದರನ ನೆರವನ್ನು ಪಡೆದು, ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದ ಪತ್ನಿ ಪೊಲೀಸರು ಹೆಣೆದ ಬಲೆಗೆ ಸಿಲುಕಿದ್ದಾರೆ. ಸಹೋದರ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಕಂಪ್ಯೂಟರ್ ಆಪರೇಟರ್ ಆಗಿರುವ ಪತ್ನಿ ಸಂಗೀತಾ, ಈಕೆಯ ಸಹೋದರ ಸಂಜಯ್, ಈತನ ಸ್ನೇಹಿತ ವಿಘ್ನೇಶ್ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಫೈಬರ್ ಡೋರ್​ಗಳನ್ನ ಫಿಟ್ ಮಾಡುವ ವೃತ್ತಿ ನಡೆಸುತ್ತಿದ್ದ ರಾಜೇಂದ್ರ ಅವರನ್ನ ಡ್ರ್ಯಾಗರ್​ನಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ ಪತ್ನಿಯ ಸಂಚನ್ನ ಬಯಲು ಮಾಡುವಲ್ಲಿ ನಂಜನಗೂಡು ಪೊಲೀಸರು ಸಕ್ಸಸ್ ಆಗಿದ್ದಾರೆ. ಗಾಯಗೊಂಡ ಗಂಡ ರಾಜೇಂದ್ರ ಇದೀಗ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏನಿದು ಘಟನೆ ?:ರಾಜೇಂದ್ರ ಹಾಗೂ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯವಿತ್ತು, ಕೌಟುಂಬಿಕ ಕಲಹದ ಹಿನ್ನೆಲೆ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ. ಅಕ್ಟೋಬರ್ 25 ರಂದು ರಾಜೇಂದ್ರ ಅವರು ಪತ್ನಿ ಸಂಗೀತಾಳನ್ನ ತಮ್ಮ ಸ್ಕೂಟರ್​ನಲ್ಲಿ ಕೂರಿಸಿಕೊಂಡು ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯ ಮುಡಾ ಲೇಔಟ್ ಬಳಿ ತೆರಳುತ್ತಿದ್ದಾಗ ಮುಂದೆ ಸಾಗುತ್ತಿದ್ದ ಬಿಳಿ ಬಣ್ಣದ ಕಾರು ಅಡ್ಡವಾಗಿ ಬಂದು ನಿಂತಿದೆ. ನಂತರ ಈ ಕಾರಿನಲ್ಲಿದ್ದ ವ್ಯಕ್ತಿ ಹತ್ತಿರ ಬಂದು ಸ್ಕೂಟರ್ ಬೀಳಿಸಿದ್ದಾನೆ.

ಆಗ ರಾಜೇಂದ್ರ ಹಾಗೂ ಸಂಗೀತಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ವ್ಯಕ್ತಿ ರಾಜೇಂದ್ರ ಜೊತೆ ಜಗಳ ಮಾಡಿದ್ದಾನೆ. ಇದೇ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಗೀತಾ ಬಳಿ ಬಂದು ಕುತ್ತಿಗೆಯಲ್ಲಿದ್ದ ಚೈನ್ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ರಾಜೇಂದ್ರ ಅವರಿಗೆ ತಿವಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಒಂದು ವಾಹನ ಬಂದಿದೆ.

ಆಗ ಮೂವರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ರಾಜೇಂದ್ರ ಅವರು ಆಸ್ಪತ್ರೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲರ್ಟ್ ಆದ ನಂಜನಗೂಡು ಪೊಲೀಸರು, ಎಸ್ಪಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್, ಡಿವೈಎಸ್ಪಿ ರಘು ಅವರ ಮಾರ್ಗದರ್ಶನದಲ್ಲಿ ಘಟನೆ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾ ನೆರವು ಹಾಗೂ ವೈಜ್ಞಾನಿಕ ಅಂಶಗಳ ನೆರವಿನಿಂದ ತನಿಖೆ ಆರಂಭಿಸಿದಾಗ ಪತ್ನಿ ಸಂಗೀತಾ ಅವರ ಕೊಲೆ ಸ್ಕೆಚ್ ಬಯಲಾಗಿದೆ. ದಂಪತಿಗಳ ನಡುವೆ ಭಿನ್ನಾಬಿಪ್ರಾಯ ಕಾರಣ :ದಂಪತಿ ನಡುವೆ ಇರುವ ಭಿನ್ನಾಭಿಪ್ರಾಯದಿಂದ ಪತಿಯನ್ನೇ ಮುಗಿಸಲು ಪತ್ನಿ ಸಂಗೀತಾ ಸ್ಕೆಚ್ ಹಾಕಿದ್ದರು. ಇದಕ್ಕೆ ತನ್ನ ಸಹೋದರನನ್ನೇ ಬಳಸಿಕೊಂಡಿದ್ದರು.

ಕೊಲೆಗಾಗಿ ಸಹೋದರ ಸಂಜಯ್ ಕಾರನ್ನು ಬಾಡಿಗೆ ಪಡೆದಿದ್ದರು. ನಂತರ ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕನ ನೆರವನ್ನು ಪಡೆದು ಹತ್ಯೆಗೆ ಸಂಚು ರೂಪಿಸಿದ್ದರು. ಸಂಜೆ 7. 30ರ ಸಮಯದಲ್ಲಿ ದಂಪತಿ ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪರಿಚಿತರಂತೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ, ಸಂಗೀತಾ ಸಹ ಸಾಕಷ್ಟು ನಟಿಸಿದ್ದಾರೆ.

ಡ್ರ್ಯಾಗರ್​ನಿಂದ ಚುಚ್ಚಿ ರಾಜೇಂದ್ರರನ್ನ ಮುಗಿಸುವ ಸ್ಕೆಚ್ ನಡೆದಿದೆ. ಅಷ್ಟರಲ್ಲಿ ವಾಹನವೊಂದು ಬಂದ ಪರಿಣಾಮ ಹತ್ಯೆ ಸ್ಕೆಚ್ ಮಿಸ್ ಆಗಿದೆ. ಸಂಗೀತಾಳನ್ನ ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಸಂಚು ಬಯಲಾಗಿದೆ. ಪತಿಯನ್ನೇ ಮುಗಿಸಲು ಯತ್ನಿಸಿದ ಪತ್ನಿ ಸಂಗೀತಾ ತನ್ನ ಸಹೋದರನ ಜೊತೆ ಕಂಬಿ ಎಣಿಸುತ್ತಿದ್ದಾರೆ. ಎಸ್​ಪಿ ಹೇಳಿದ್ದೇನು ?: ಅಕ್ಟೋಬರ್‌ 25 ರಂದು ನಡೆದ ಈ ಘಟನೆಯ ಸಂಬಂಧ ನಂಜನಗೂಡು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತಂಡ ರಚನೆ ಮಾಡಲಾಗಿತ್ತು.

ತನಿಖೆ ಕೈಗೊಂಡಾಗ ಗಂಡನ ಕೊಲೆಗೆ ಹೆಂಡತಿ ಪ್ಲಾನ್‌ ಮಾಡಿರುವುದು ಗೊತ್ತಾಗಿದೆ. ಈ ಘಟನೆಯ ಸಂಬಂಧ ಹೆಂಡತಿ ಹಾಗೂ ಒಬ್ಬ ಅಪ್ರಾಪ್ತ ಬಾಲಕ ಸೇರಿ 4 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ತಿಳಿಸಿದ್ದಾರೆ.

📚 Related News