ವರದಿ:ರವಿಕುಮಾರ್ ಎಂ. ಕೆ. ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಇಂದಿಗೆ ನಾಲ್ಕು ವರ್ಷ. ಆದ್ರೆ, ಅವರ ನೆನಪು ಮಾತ್ರ ಸದಾ ಜೀವಂತ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿಗೆ ಇಂದು ವಿಶೇಷ ಪೂಜೆ ಸಲ್ಲಿಸಲಾಗಿದೆ.
ಡಾ. ರಾಜ್‌ಕುಮಾರ್ ಮೊಮ್ಮಗ, ಪುನೀತ್ ರಾಜ್‍ಕುಮಾರ್ ಅಕ್ಕ ಲಕ್ಷ್ಮೀ ಗೋವಿಂದರಾಜ್ ಪುತ್ರ ಷಣ್ಮುಖ ಗೋವಿಂದರಾಜ್ ಅವರು ಪುನೀತ್ ಅವರ ಬಾಲ್ಯದ ದಿನಗಳು ಹೇಗಿದ್ದವು? ರಾಜ್, ಪುನೀತ್ ಅವರ ಯಾವ ಸಿನಿಮಾ ಇಷ್ಟ? ಹೀಗೆ ಹಲವು ವಿಷಯಗಳನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ. ಪ್ರಶ್ನೆ:ಬಾಲ್ಯದಿಂದಲೇ ಅಪ್ಪು ಅವರನ್ನು ನೋಡಿಕೊಂಡು ಬಂದಿದ್ರಿ, ಈಗ ಅಪ್ಪು ಅಂದಾಕ್ಷಣ ಏನು ನೆನಪಾಗುತ್ತದೆ?ಅಪ್ಪು ಮಾಮ ಅಂದಾಕ್ಷಣ ನನಗೆ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ನಾವು ಚಿಕ್ಕವಯಸ್ಸಿನಿಂದಲೂ ನೋಡಿರೋದು ಅವರ ನಗು. ಅಪ್ಪ - ಅಮ್ಮನ ಹತ್ತಿರ ಹೇಳಿಕೊಳ್ಳಲಾಗದ ವಿಚಾರಗಳನ್ನು ನಾವು ಅಪ್ಪು ಮಾಮನ ಹತ್ತಿರ ಹೇಳುತ್ತಿದ್ದೆವು.
ಪರುಶುರಾಮ ಸಿನಿಮಾದಲ್ಲಿ ಶೂಟಿಂಗ್ ಮುಗಿಸಿ ಬಂದು ನಮಗೆ ಕಥೆ ಹೇಳೋರು. ಇನ್ನು ಅಪ್ಪು ಮಾಮ ಹಾಗೂ ಅಶ್ವಿನಿ ಅಕ್ಕನ ಮದುವೆ ತುಂಬಾ ಚೆನ್ನಾಗಿ ನೆನಪಿದೆ. ಆಗ ನಾನು ಹತ್ತನೆ ತರಗತಿಯಲ್ಲಿದ್ದೆ. ಆ ಮದುವೆ ಸಂಭ್ರಮವನ್ನು ಮರೆಯೋದಿಕ್ಕೆ ಆಗೋದಿಲ್ಲ. ಇದೇ ಕಂಠೀರವ ಸ್ಟುಡಿಯೋದಲ್ಲಿ ಅವರ ಅಪ್ಪು ಸಿನಿಮಾದ ಶೂಟಿಂಗ್ ನೋಡಿದ್ವಿ.
ತಾತ ಅವರ ಜೊತೆ ಬಂದು ಆ್ಯಕ್ಷನ್ ಸೀಕ್ವೆನ್ಸ್ ಮಾಡಿದ್ದರು. ಅದನ್ನು ಮರೆಯೋದಕ್ಕೆ ಆಗೋಲ್ಲ ಎಂದರು. ಪ್ರಶ್ನೆ:ನಿಮ್ಮ ಕುಟುಂಬದಲ್ಲಿ ಕಮ್ಮಿ ಅಂದ್ರೂ 20 ರಿಂದ 30 ಜನ ಇರುತ್ತಿದ್ರಿ. ತಾತ ರಾಜ್ ಹಾಗೂ ಅಪ್ಪು ಜೊತೆ ನಿಮ್ಮ ಒಡನಾಟ ಹೇಗಿತ್ತು?ನನಗೆ ನೆನಪಿರುವ ಹಾಗೇ ದೀಪಾವಳಿ ಹಾಗೂ ನ್ಯೂ ಇಯರ್ ಅನ್ನು ಬೇರೆ ಕಡೆ ಹೋಗಿ ಸೆಲೆಬ್ರೇಟ್ ಮಾಡಿಲ್ಲ. ಇಡೀ ಕುಟುಂಬ ಅಂದ್ರೆ 50 ರಿಂದ 60 ಜನ ಸೇರಿ ಮನೆಯಲ್ಲೇ ಸೆಲೆಬ್ರೇಟ್ ಮಾಡುತ್ತಿದ್ದೆವು.
ದೀಪಾವಳಿ ಸಂದರ್ಭ ಪಟಾಕಿ ಹೊಡೆದಿರುವ ಕ್ಷಣಗಳನ್ನು ಮರೆಯೋದಕ್ಕೆ ಆಗೋಲ್ಲ ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಪ್ರಶ್ನೆ:ಪುನೀತ್ ರಾಜ್‍ಕುಮಾರ್ ಅವರು ಸೂಪರ್ ಸ್ಟಾರ್ ಆದ ಬಳಿಕ ನಿಮ್ಮೊಂದಿಗೆ ಹೇಗಿರುತ್ತಿದ್ರು?ಅವರ ಪ್ರತೀ ಸಿನಿಮಾ ಬಿಡುಗಡೆಯಾದಾಗ ನನ್ನ ಬಳಿ, ನೀನು ಸಿನಿಮಾ ನೋಡಿದ್ದೀಯಾ? ಹೇಗನಿಸಿತು? ಅಂತಾ ಸಿನಿಮಾ ಬಗ್ಗೆ ಕೇಳೋರು. ಹಾಗೇ ಸಿನಿಮಾ ಬಗ್ಗೆ ನೆಗೆಟಿವ್ ಹೇಳಿದಾಗಲೂ ಅದನ್ನು ಸ್ವೀಕರಿಸಿತ್ತಿದ್ರು. ಅಷ್ಟು ಫ್ರೀಡಂ ಇತ್ತು. ಮಾಮನ ಸಿನಿಮಾ ಶೂಟಿಂಗ್ ಇರುತ್ತೆ ಅಂದ್ರೆ ನಾವು ಮೂರು, ನಾಲ್ಕು ದಿನ ಹೋಗುತ್ತಿದ್ದೆವು.
ಅವರ ಜೊತೆ ಕಾಲ ಕಳೆಯೋದು ಅಂದ್ರೆ ನಮೆಗೆಲ್ಲಾ ತುಂಬಾನೇ ಇಷ್ಟ ಆಗುತ್ತಿತ್ತು ಎಂದು ತಿಳಿಸಿದ್ರು. ಪ್ರಶ್ನೆ:ಅಪ್ಪು ಅವರ ಯಾವ ಸಿನಿಮಾ ಇಷ್ಟ?ಅವರು ಚೈಲ್ಡ್ ಆರ್ಟಿಸ್ಟ್ ಆಗಿ ಮಾಡಿರೋ ಭಾಗ್ಯವಂತ ಸಿನಿಮಾ ನನಗೆ ಈಗಲೂ ಇಷ್ಟ. ಇವತ್ತಿಗೂ ಆ ಸಿನಿಮಾ ನೋಡಿದಾಗ ಕಣ್ಣೀರು ಬರುತ್ತೆ. ಆ ಚಿಕ್ಕ ವಯಸ್ಸಿನಲ್ಲಿ ಮಾಡಿರೋ ಅದ್ಭುತ ಅಭಿನಯ ನೋಡಿದ್ರೆ ಎಂಥವರ ಕಣ್ಣಲ್ಲಿಯೂ ನೀರು ತರಿಸುತ್ತದೆ. ಇನ್ನು ಸ್ಟಾರ್ ಆದ ಬಳಿಕ ಇಷ್ಟವಾದ ಸಿನಿಮಾ ಅಂದ್ರೆ ಅದು ಅಪ್ಪು.
ಫಸ್ಟ್ ಡೇ ಫಸ್ಟ್ ಶೋ ನೋಡಿದ್ದೆ. ಫಸ್ಟ್ ಸೀನ್ - ಜಂಪ್ ಮಾಡಿ ಬರುವ ಆ್ಯಕ್ಷನ್ ಸೀಕ್ವೆನ್ಸ್ ಹಾಗೂ ಕಾಲೇಜಿನಲ್ಲಿ ನಡೆಯುವ ಆ್ಯಕ್ಷನ್ ಸೀನ್ಗಳನ್ನು ಇವತ್ತಿಗೂ ಯೂಟ್ಯೂಬ್ನಲ್ಲಿ ನೋಡುತ್ತೇನೆ. ಅಂದು ಹೇಗೆ ಮೈ ರೋಮಾಂಚನ ಆಗಿತ್ತೋ ಅದೇ ರೀತಿ ಇಂದಿಗೂ ಆಗುತ್ತೆ ಎಂದು ಷಣ್ಮುಖ ಗೋವಿಂದರಾಜ್ ಹೇಳಿದ್ರು. ಪ್ರಶ್ನೆ:ಅಪ್ಪು ಸಿನಿಮಾಗಳ ಬಗ್ಗೆ ನಿಮ್ಮ ತಂದೆ ತಾಯಿ ಏನು ಹೇಳುತ್ತಿದ್ರು?ಅಪ್ಪು ಮಾಮ ಗಂಧದ ಗುಡಿ ಸಿನಿಮಾ ಶೂಟಿಂಗ್ ಅಂತಾ ಬಿ ಆರ್ ಹಿಲ್ಸ್ ಕಾಡಿಗೆ ಹೋಗಿದ್ರು. ವೀರಪ್ಪನ್ ತಾತನನ್ನು ಕಿಡ್ನಾಪ್ ಮಾಡಿ ಅದೇ ಕಾಡಿನಲ್ಲಿ ಇಟ್ಟಿದ್ದ ಘಟನೆ ನಡೆದಿತ್ತು.
ಆ ಶೂಟಿಂಗ್ ಮುಗಿಸಿದ ಪುನೀತ್ ಮಾಮ ನಮ್ಮ ತಂದೆ ಹತ್ತಿರ ಬಂದು ನೀವು ಕಾಡಿನಲ್ಲಿ ಹೇಗೆ ಇದ್ರಿ ಅಂತಾ ಕೇಳಿದ್ರು. ಏಕೆಂದರೆ ಪೊಲೀಸ್ ಸೆಕ್ಯೂರಿಟಿ, ಸೇಫ್ಟಿ ನಡುವೆಯೂ ಆ ದಟ್ಟ ಕಾಡಿನಲ್ಲಿ ಎರಡು ದಿನ ಶೂಟಿಂಗ್ ಮಾಡೋದು ಕಷ್ಟ ಆಗಿತ್ತು ಅಂತಾ ಅಪ್ಪು ಮಾಮ ತಿಳಿಸಿದ್ರು. ಇನ್ನು ಗೋವಿಂದರಾಜ್ ಅವರು ವಜ್ರೇಶ್ವರಿ ಪ್ರೊಡಕ್ಷನ್ ಸಂಸ್ಥೆಯಲ್ಲಿ ಸಿನಿಮಾ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದಾಗ ಅಪ್ಪು ಅವರ ಬಾಲ್ಯದ ಚಿತ್ರಗಳಾದ ಭಾಗ್ಯವಂತ, ಭಕ್ತ ಪ್ರಹ್ಲಾದ, ಎರಡು ನಕ್ಷತ್ರ, ಯಾರಿವನು ಸಿನಿಮಾ ಸಂದರ್ಭ ಅಪ್ಪು ತಮ್ಮ ಪಾಡಿಗೆ ಶೂಟಿಂಗ್ ಮುಗಿಸಿ ಅಲ್ಲೇ ಆಟ ಆಡುತ್ತಿದ್ರು. ಬೆಟ್ಟದ ಹೂ ಸಿನಿಮಾ ಶೂಟಿಂಗ್ ಟೈಮಲ್ಲಿ ಅಲ್ಲಿ ಮಕ್ಕಳ ಜೊತೆ ಅಪ್ಪು ಆಟ ಆಡ್ತಾ ಇದ್ದ ಅಂತಾ ಷಣ್ಮುಖರ ತಂದೆ ಹೇಳುತ್ತಿದ್ದರಂತೆ. ಪ್ರಶ್ನೆ: ಪುನೀತ್ ರಾಜ್‍ಕುಮಾರ್ ನಿಧನವಾದ ದಿನ ಅಂದ್ರೆ ಅಕ್ಟೋಬರ್ 29 ನೇ ತಾರೀಖು ಅಂದಾಗ ನಿಮ್ಮ ಮನೆಯವರ ಮನಸ್ಥಿತಿ ಹೇಗಿರುತ್ತೆಅಕ್ಟೋಬರ್ ಬಂದಾಗ್ಲೇ ಎಷ್ಟು ವರ್ಷ ಆಯಿತು ಅನ್ನೋದನ್ನು ಕೌಂಟ್ ಮಾಡ್ತೀವಿ.
ಅಕ್ಟೋಬರ್ 29, 2021 ಮರೆಯಲಾಗದ ದಿನ. ಅಪ್ಪು ಮಾಮಗೆ ಒಂದು ಚಾನ್ಸ್ ಸಿಗಬಾರಾದ, ಆ ದೇವರು ಒಂದು ಚಾನ್ಸ್ ಕೊಡಬಾರದೇ ಅಂತಾ ನಾವು ಬೇಡಿಕೊಂಡಿದ್ವಿ ಅಂತಾರೆ ಪುನೀತ್ ರಾಜ್‍ಕುಮಾರ್ ಅಕ್ಕನ ಮಗ ಷಣ್ಮುಖ ಗೋವಿಂದರಾಜ್.








