ಉಡುಪಿ: ಕೆರೆಯಲ್ಲಿ ಬಿದ್ದ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಚೀಲವನ್ನು ಮೇಲಕ್ಕೆತ್ತಿದ ಈಶ್ವ‌ರ್ ಮಲ್ಪೆ ತಂಡ

ಉಡುಪಿ: ಕೆರೆಯಲ್ಲಿ ಬಿದ್ದ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಚೀಲವನ್ನು ಮೇಲಕ್ಕೆತ್ತಿದ ಈಶ್ವ‌ರ್ ಮಲ್ಪೆ ತಂಡ
By Published : October 30, 2025 at 4:21 PM IST

ಮಲ್ಪೆ (ಉಡುಪಿ) : ಸುಮಾರು 20 ಅಡಿ ಆಳದ ಕೆರೆ ನೀರಿಗೆ ಬಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿರುವ ಚೀಲವನ್ನು ಮೇಲಕ್ಕೆತ್ತಿದ ಈಶ್ವ‌ರ್ ಮಲ್ಪೆ ಅವರ ತಂಡ ವಾರಸುದಾರರಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಚಿಕ್ಕಮಗಳೂರು ಮಾಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತ್ತು. ಅದರಲ್ಲಿದ್ದ ಜ್ಯುವೆಲ್ಲರಿ ಅಂಗಡಿಯ ಮಾಲೀಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ತರಿಸಿ ಮೇಲಕ್ಕೆತ್ತಲಾಯಿತು. ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿನಲ್ಲಿ ಬಿದ್ದಿತ್ತು.

ಕೂಡಲೇ ಉಡುಪಿಯ ಈಶ್ವರ್ ಮಲ್ಪೆಗೆ ಕರೆ ಮಾಡಿ ತಿಳಿಸಲಾಯಿತು. ಕೂಡಲೇ ಅಲ್ಲಿಗೆ ತೆರಳಿದ್ದ ಈಶ್ವ‌ರ್ ಮಲ್ಪೆ ಅವರ ತಂಡ ಕೇವಲ 15 ನಿಮಿಷದಲ್ಲಿ ಚಿನ್ನದ ಚೀಲವನ್ನು ನೀರಿನಿಂದ ಮೇಲಕ್ಕೆತ್ತಿದರು. ಈ ಕುರಿತು ಜೊತೆ ಮಾತನಾಡಿದ ಈಶ್ವರ್ ಮಲ್ಪೆ, 'ಈ ಮೊದಲು ಕೂಡ ಸಾಕಷ್ಟು ಬಾರಿ ನೀರಿಗೆ ಬಿದ್ದ ಚಿನ್ನಾಭರಣಗಳನ್ನು ಹುಡುಕಿ ಕೊಟ್ಟಿದ್ದೇನೆ. ಇದೇ ಮೊದಲ ಸಲ ಏನಲ್ಲ. ಆದರೆ, ಈ ಬಾರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಾರಿನ ಸಮೇತ ನೀರಿಗೆ ಬಿದ್ದಿತ್ತು.

ತಕ್ಷಣ ನನಗೆ ಫೋನ್ ಬಂತು. ನಾನು ಸ್ಥಳಕ್ಕೆ ಹೋಗಿ ಕೆಲ ಹೊತ್ತು ಕಾರ್ಯಾಚರಣೆ ಮಾಡಿದೆ. ಚಿನ್ನಾಭರಣವನ್ನು ನೀರಿನಿಂದ ತೆಗೆದುಕೊಟ್ಟೆ. ಅವರಿಗೆ ಬಹಳ ಸಂತೋಷವಾಯಿತು. ಮಾನವೀಯ ಕಾರ್ಯ ಎಂಬ ನೆಲೆಯಲ್ಲಿ ಇದನ್ನು ಮಾಡಿದ್ದೇನೆ' ಎಂದಿದ್ದಾರೆ.

ಚಿನ್ನಾಭರಣವಿದ್ದ ಚೀಲ ಕೆಸರಿನಲ್ಲಿ ಹೂತು ಹೋಗಿತ್ತು, ಎಲ್ಲೆಡೆ ಕತ್ತಲೆ, ಕಣ್ಣಿಗೆ ಏನೂ ತೋರುತ್ತಿರಲಿಲ್ಲ. ಸುಮಾರು 20 ಅಡಿಗಳಷ್ಟು ಆಳಕ್ಕೆ ಹೋಗಿ ಜಾಲಾಡಿದಾಗ ಕೈಗೆ ಸಿಕ್ಕಿತು. ದೇವರ ಅನುಗ್ರಹ ಹಾಗೂ ಜನರ ಆಶೀರ್ವಾದದಿಂದ ಚಿನ್ನ ಮತ್ತೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

📚 Related News