ತುಮಕೂರು:ರಾಷ್ಟ್ರೀಯ ಪಕ್ಷದಲ್ಲಿ ಯಾವತ್ತೂ ಕೂಡ ತೀರ್ಮಾನ ಮಾಡುವುದು ಹೈಕಮಾಂಡ್ ಆಗಿರುತ್ತದೆ. ನಾವೇನೇ ಅನ್ನುಕೊಳ್ಳಬಹುದು, ಅದು ಇವರಿರಲಿ ಅಥವಾ ಅವರಿರಲಿ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ಹೇಳಿದರು. ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿ ತೀರ್ಮಾನ ಆಗಲಿದೆ ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ.
ಅದು ಕಾಂಗ್ರೆಸ್ ಅಥವಾ ಬಿಜೆಪಿ ಇರಬಹುದು. ಹೈಕಮಾಂಡ್ನದ್ದೇ ಅಂತಿಮ ತೀರ್ಮಾನ. ಮುಖ್ಯಮಂತ್ರಿ ಮುಂದುವರೆಯಬೇಕೆಂಬುದು ನಮ್ಮ ಆಸೆ, ಅದರಲ್ಲಿ ತಪ್ಪೇನಿದೆ. ಆಸೆ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಅದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇರಬಹುದು, ಎಲ್ಲವೂ ಅಷ್ಟೇ ಎಂದರು.
ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಇದೇ ರೀತಿ ಪರಿಸ್ಥಿತಿ ಇತ್ತು. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಂತೆಯೇ ಆಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವರು ಇದ್ದಾರೆ. ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಸ್ಥಾನ ಬೇಡ ಎಂದು ಹೇಳಿದವರಿದ್ದಾರೆ. ಇದು ಕಾಂಗ್ರೆಸ್ ಇತಿಹಾಸ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಮುಂದೊಂದು ದಿನ ನಾನು ಸೇರಿದಂತೆ ಅವರು, ಪ್ರಧಾನಿ ಆಗಬೇಕೆಂಬ ಅಭಿಲಾಷೆ ಹೊಂದಿದವರಾಗಿದ್ದೇವೆ ಎಂದು ಹೇಳಿದರು. ಸರ್ಕಾರಿ ಸ್ಥಳಗಳಲ್ಲಿ ಆರ್ಆರ್ಎಸ್ ಚಟುವಟಿಕೆ ನಿರ್ಬಂಧ ಕುರಿತ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆ ನೀಡಿರುವ ಬಗ್ಗೆ ಮಾತನಾಡಿ, ಹೈಕೋರ್ಟ್ನಲ್ಲಿ ತೀರ್ಮಾನ ಆದ ಮೇಲೆ ಪ್ರಶ್ನೆ ಮಾಡುವ ಹಕ್ಕು ಇಲ್ಲ. ಸಾರ್ವಜನಿಕವಾಗಿ ಟೀಕೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಈ ಸಂಬಂಧ ಹೈಯರ್ ಕೋರ್ಟ್ನಲ್ಲಿ ಅಪೀಲು ಸಲ್ಲಿಸಬಹುದು.
ರಾಜ್ಯ ಸರ್ಕಾರದ ತೀರ್ಮಾನಗಳಿಗೂ ಕೆಲವೊಂದು ಬಾರಿ ಈ ರೀತಿ ಆಗಲಿದೆ. ಹಾಗಂತ ಇದು ಸರ್ಕಾರಕ್ಕೆ ಹಿನ್ನಡೆ ಅಂತ ಅಲ್ಲ ಎಂದು ತಿಳಿಸಿದರು. ಸಂಪುಟ ಪುನಾರಚನೆ ಆದರೆ ಸಿದ್ದರಾಮಯ್ಯ ನಾಯಕತ್ವ ಅಬಾಧಿತ: ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಕೊಟ್ಟಲ್ಲಿ ಸಿಎಂ ಸಿದ್ದರಾಮಯ್ಯ ನಾಯಕತ್ವ ಅಬಾಧಿತ ಎಂದು ಮಾಜಿ ಸಚಿವ ಕೆ. ಎನ್. ರಾಜಣ್ಣ ಇತ್ತೀಚಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಬೆಂಗಳೂರಲ್ಲಿ ಮಾತನಾಡಿದ್ದ ಅವರು, ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಇದೀಗ ಎರಡೂವರೆ ವರ್ಷ ಆಗಿದೆ. ಎರಡೂವರೆ ವರ್ಷ ಆದ ಬಳಿಕ ಸಂಪುಟ ಪುನಾರಚನೆ ಮಾಡಲಿಕ್ಕೆ ಅನುಮತಿ ಸಿಕ್ಕರೂ ಸಿಎಂ ಬದಲಾವಣೆ ಇಲ್ಲ. ಒಂದು ವೇಳೆ ಅನುಮತಿ ಸಿಗದೇ ಇದ್ದರೆ ರಾಜಕೀಯದ ಚಟುವಟಿಕೆಗಳು ನಡೆಯುತ್ತವೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ.
ಹೀಗೆ ಹೈಕಮಾಂಡ್ ಘೋಷಣೆ ಮಾಡಲಿದೆ ಎಂಬುದು ನನ್ನ ನಿರೀಕ್ಷೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ನಾನು ಸಿಎಂ ಬದಲಾವಣೆ ಆಗಲ್ಲ ಎಂಬ ನಿರೀಕ್ಷೆಯಲ್ಲಿದ್ದೇನೆ. ಒಂದು ವೇಳೆ, ಬದಲಾವಣೆ ಮಾಡಬೇಕು ಎಂಬ ವಿಚಾರ ಇದ್ದರೆ ಹೈಕಮಾಂಡ್ ತೀರ್ಮಾನ ಮಾಡಲಿದೆ, ಅದೇ ನಡೆಯುತ್ತದೆ ಎಂದಿದ್ದರು.







