ಬಾಕ್ಸ್​ ಆಫೀಸ್​ ಇತಿಹಾಸ ಬದಲಾಯಿಸಿದ 'ಕಾಂತಾರ' ನಾಳೆ ಒಟಿಟಿಗೆ: ಕಳೆದೊಂದು ತಿಂಗಳಲ್ಲಿ ಭರ್ಜರಿ ಗಳಿಕೆ

ಬಾಕ್ಸ್​ ಆಫೀಸ್​ ಇತಿಹಾಸ ಬದಲಾಯಿಸಿದ 'ಕಾಂತಾರ' ನಾಳೆ ಒಟಿಟಿಗೆ: ಕಳೆದೊಂದು ತಿಂಗಳಲ್ಲಿ ಭರ್ಜರಿ ಗಳಿಕೆ
By Published : October 30, 2025 at 10:41 AM IST

ಚಂದನವನದ ಪ್ರತಿಭಾನ್ವಿತ ಕಲಾವಿದ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ ಕರ್ನಾಟಕ, ಭಾರತ ಮತ್ತು ಅದರಾಚೆಗಿನ ಬಾಕ್ಸ್ ಆಫೀಸ್ ಇತಿಹಾಸವನ್ನು ಬದಲಾಯಿಸಿದೆ. ಜಾನಪದ ಸಾಹಸ ಥ್ರಿಲ್ಲರ್ ಸ್ಥಳೀಯ ಪ್ರದೇಶಗಳಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮತ್ತು ಜಾಗತಿಕ ಮಟ್ಟದಲ್ಲೂ ಸಂಚಲನ ಸೃಷ್ಟಿಸಿದೆ. ಕೇವಲ 14 ದಿನಗಳಲ್ಲಿ, ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ದಾಖಲೆ ಬರೆದ ಸಿನಿಮಾ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಕಳೆದ 28 ದಿನಗಳಲ್ಲಿ ಸರಿಸುಮಾರು 600 ಕೋಟಿ ರೂಪಾಯಿ ಗಳಿಸಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್ ವರದಿ ಪ್ರಕಾರ, ರಿಷಬ್ ಶೆಟ್ಟಿ ಸಾರಥ್ಯದ ಕಾಂತಾರ ಪ್ರೀಕ್ವೆಲ್​​​​ ತನ್ನ 28ನೇ ದಿನ ಅಂದರೆ ನಾಲ್ಕನೇ ಬುಧವಾರ ಭಾರತದಲ್ಲಿ 2. 48 ಕೋಟಿ ರೂಪಾಯಿ ನೆಟ್​​ ಕಲೆಕ್ಷನ್​ ಮಾಡಿದೆ.

ಈ ಮೂಲಕ ಇಂಡಿಯಾ ನೆಟ್​ ಕಲೆಕ್ಷನ್​ 599 ಕೋಟಿ ರೂಪಾಯಿಗೆ ತಲುಪಿದೆ. 61. 85 ಕೋಟಿ ರೂಪಾಯಿಯೊಂದಿಗೆ ಭಾರತದಲ್ಲಿ (ನೆಟ್​ ಕಲೆಕ್ಷನ್​) ಬಾಕ್ಸ್​ ಆಫೀಸ್​​ ಪ್ರಯಾಣ ಪ್ರಾರಂಭಿಸಿತ್ತು. ಬಹು ತಾರಾಗಣದ ಈ ಚಿತ್ರ ಅಕ್ಟೋಬರ್ 2ರಂದು ಭಾರತ ಮಾತ್ರವಲ್ಲದೇ ಪ್ರಪಂಚದ 30+ ದೇಶಗಳಲ್ಲಿ ಬಿಡುಗಡೆ ಆಗಿದೆ. ಒಟಿಟಿ ರಿಲೀಸ್​ ಡೇಟ್ ಅನೌನ್ಸ್​ ಆಗಿದ್ದು, ಚಿತ್ರಮಂದಿರಗಳಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದೆ.

ಈ ಯಶಸ್ವಿ ಸಿನಿಮಾ ಇದೇ ಅಕ್ಟೋಬರ್ 31ರಂದು ಅಂದರೆ ನಾಳೆ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆ ಆಗಿ ತಿಂಗಳು ಪೂರೈಸುವ ಸಮಯ ಬಂದರೂ, ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಜೊತೆಗೆ ಈ ಸಾಲಿನ ಬ್ಲಾಕ್​ಬಸ್ಟರ್ ಛಾವಾ ಸಿನಿಮಾವನ್ನೂ ಹಿಂದಿಕ್ಕೆ, ಅತಿ ಹೆಚ್ಚು ಕಲೆಕ್ಷನ್​ ಮಾಡಿದ 2025ರ ಭಾರತೀಯ ಸಿನಿಮಾ ಆಗಿ ಹೊರಹೊಮ್ಮಿದೆ. ಬಾಕ್ಸ್​ ಆಫೀಸ್​ ಅಂಕಿ - ಅಂಶ ಇನ್ನೂ ಕೋಟಿ ಲೆಕ್ಕದಲ್ಲಿರೋದು ಹೆಮ್ಮೆಯ ವಿಷಯ. ಈ ಚಿತ್ರ ವಿಶ್ವಾದ್ಯಂತ ಸರಿಸಮಾರು 850 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಮೂಲ ಕಾಂತಾರ 2022ರ ಸೆಪ್ಟೆಂಬರ್​ 30ರಂದು ತೆರೆಕಂಡು ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಚಿತ್ರದ ಪ್ರೀಕ್ವೆಲ್​ ಆಗಿರುವ ಕಾಂತಾರ ಚಾಪ್ಟರ್ 1ನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸಿನಿಮಾ ಯಶಸ್ವಿಯಾಗಿದ್ದು, ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಅವರ ಜನಪ್ರಿಯತೆಯನ್ನು ದುಪ್ಪಟ್ಟುಗೊಳಿಸಿದೆ.

📚 Related News