Pro Kabaddi Bengaluru Bulls:12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನಿಂದ ಬೆಂಗಳೂರು ಬುಲ್ಸ್ ತಂಡ ಹೊರಬಿದ್ದಿದೆ. ಸೋಮವಾರ ದೆಹಲಿಯ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ 2 ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಬೆಂಗಳೂರು ಬುಲ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಬುಲ್ಸ್ ಪಡೆ 37 - 46 ಅಂತರದಿಂದ ಸೋಲನ್ನು ಕಂಡು ಟೂರ್ನಿಯಿಂದ ಹೊರಬಿತ್ತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರಂಭದಿಂದಲೂ ಅದ್ಭುತ ಆಟವಾಡಿದ ಪಾಟ್ನಾ ತಂಡ ಸತತವಾಗಿ ಅಂಕಗಳನ್ನು ಗಳಿಸಿ ಪ್ರಭಾವ ಬೀರಿತ್ತು. ಮತ್ತೊಂದೆಡೆ, ಬೆಂಗಳೂರು ತಂಡ ಅಂಕಗಳನ್ನು ಕಲೆಹಾಕಲು ಬಾರಿ ಹೆಣಗಾಡಿತ್ತು.
ಇದರಿಂದಾಗಿ, ಮೊದಲಾರ್ಧದ ಅಂತ್ಯದಲ್ಲಿ, ಪಾಟ್ನಾ ಪೈರೇಟ್ಸ್ 16 ರೈಟ್ ಪಾಯಿಂಟ್‌ಗಳು, 6 ಟ್ಯಾಕಲ್ ಪಾಯಿಂಟ್‌ಗಳು, 4 ಆಲ್ ಔಟ್ ಮತ್ತು ಒಂದು ಹೆಚ್ಚುವರಿ ಪಾಯಿಂಟ್‌ನೊಂದಿಗೆ 27 ಅಂಕಗಳನ್ನು ಕಲೆಹಾಕಿತು. ಬೆಂಗಳೂರು ತಂಡಕ್ಕೆ 7 ರೈಡ್ ಪಾಯಿಂಟ್, 4 ಟ್ಯಾಕಲ್ ಪಾಯಿಂಟ್ ಮತ್ತು 2 ಹೆಚ್ಚುವರಿ ಪಾಯಿಂಟ್‌ನೊಂದಿಗೆ 13 ಅಂಕಗಳನ್ನು ಗಳಿಸಿತು. ಇದರೊಂದಿಗೆ, ಪಾಟ್ನಾ ತಂಡವು ಮೊದಲಾರ್ಧದ ಅಂತ್ಯದಲ್ಲಿ 14 ಅಂಕಗಳ ಮುನ್ನಡೆ ಪಡೆದು, ಗೆಲುವಿಗೆ ಅಡಿಪಾಯ ಹಾಕಿತು. ಬೆಂಗಳೂರಿಗೆ ಸೋಲು:ನಂತರ ದ್ವಿತೀಯಾರ್ಧದಲ್ಲಿ ಬೆಂಗಳೂರು ತಂಡವು ಭರ್ಜರಿ ಕಮ್ಬ್ಯಾಕ್ ಮಾಡಿತು. ದ್ವಿತೀಯಾರ್ಧದ ಅಂತ್ಯದ ವೇಳೆ ಬೆಂಗಳೂರು ತಂಡವು 17 ರೈಡ್ ಪಾಯಿಂಟ್ಸ್, 4 ಟ್ಯಾಕಲ್ ಪಾಯಿಂಟ್ಸ್, 2 ಆಲ್ ಔಟ್ ಪಾಯಿಂಟ್ಸ್ ಮತ್ತು ಒಂದು ಹೆಚ್ಚುವರಿ ಪಾಯಿಂಟ್‌ನೊಂದಿಗೆ 24 ಅಂಕಗಳನ್ನು ಕಲೆ ಹಾಕಿತು.
ಮತ್ತೊಂದೆಡೆ, ಪಾಟ್ನಾ 13 ರೈಡ್ ಪಾಯಿಂಟ್ಸ್, 5 ಟ್ಯಾಕಲ್‌ಗಳು ಮತ್ತು ಒಂದು ಹೆಚ್ಚುವರಿ ಪಾಯಿಂಟ್‌ನೊಂದಿಗೆ 19 ಅಂಕಗಳನ್ನು ಮಾತ್ರ ಕಲೆ ಹಾಕಿ ಪಂದ್ಯವನ್ನು ಗೆದ್ದುಕೊಂಡಿತು. ಕಾರಣ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಬುಲ್ಸ್ ಪಡೆ ಎರಡನೇ ಅವಧಿಯಲ್ಲಿ ಉತ್ತಮ ಆಟವಾಡಿದರೂ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಟ್ನಾ ಪೈರೇಟ್ಸ್ ತಂಡವು ಬೆಂಗಳೂರು ಬುಲ್ಸ್ ತಂಡವನ್ನು 46-37 ಅಂಕಗಳಿಂದ ಸೋಲಿಸಿ ಎಲಿಮಿನೇಟರ್ ಸುತ್ತಿಗೆ ಮುನ್ನಡೆಯಿತು. ಮತ್ತೊಂದೆಡೆ, ಸೋಲು ಅನುಭವಿಸಿದ ಬೆಂಗಳೂರು ಬುಲ್ಸ್, ಪ್ರಸಕ್ತ ಋತುವಿನ ತನ್ನ ಪ್ರಯಾಣವನ್ನು ಕೊನೆಗೊಳಿಸಿ ಸರಣಿಯಿಂದ ಹೊರಬಿತ್ತು. ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತೆಲುಗು ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಫೈನಲ್ಗೆ ದಬಾಂಗ್ ಡೆಲ್ಲಿ: ನಿನ್ನೆ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟನ್ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಮೊದಲಾರ್ಧದ ಅಂತ್ಯದಲ್ಲಿ ಪುಣೇರಿ ಪಲ್ಟನ್ 17 ಅಂಕ ಮತ್ತು ದಬಾಂಗ್ ಡೆಲ್ಲಿ 18 ಅಂಕಗಳನ್ನು ಕಲೆಹಾಕಿದವು. ಪಂದ್ಯದ ದ್ವಿತೀಯಾರ್ಧವೂ ಸಹ ರೋಚಕವಾಗಿತ್ತು. ಎರಡೂ ತಂಡಗಳು ಸತತ ಅಂಕಗಳನ್ನು ಗಳಿಸುತ್ತಿದ್ದಂತೆ, ಯಾವ ತಂಡ ಗೆಲ್ಲುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು.
ದ್ವಿತೀಯಾರ್ಧದ ಅಂತ್ಯದಲ್ಲಿ, ಪುಣೇರಿ ಪಲ್ಟನ್ 17 ಅಂಕಗಳನ್ನು ಮತ್ತು ದಬಾಂಗ್ ದೆಹಲಿ 16 ಅಂಕಗಳನ್ನು ಗಳಿಸಿತು. ಪಂದ್ಯದ ಅಂತ್ಯದಲ್ಲಿ ಎರಡೂ ತಂಡಗಳು ತಲಾ 34 ಅಂಕಗಳನ್ನು ಹೊಂದಿದ್ದ ಕಾರಣ ಪಂದ್ಯವು ಸೂಪರ್ ರೈಡ್‌ಗೆ ತಲುಪಿತು. ಸೂಪರ್ ರೈಡ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಬಾಂಗ್ ಡೆಲ್ಲಿ ತಂಡವು 5 ರೈಡ್ ಗಳಿಂದ 6 ಅಂಕಗಳನ್ನು ಗಳಿಸಿದರೆ, ಪುಣೇರಿ ಪಲ್ಟನ್ ತಂಡ ಕೇವಲ 4 ಅಂಕಗಳನ್ನು ಗಳಿಸಿ ಸೋಲು ಕಂಡಿತು. ಇದರೊಂದಿಗೆ ಡೆಲ್ಲಿ ತಂಡ ಪ್ರಸ್ತುತ ಪ್ರೊ ಕಬಡ್ಡಿ ಲೀಗ್ನಲ್ಲಿ ಫೈನಲ್ಗೆ ಮುನ್ನಡೆದ ಮೊದಲ ತಂಡವಾಯಿತು.








