ಅಕಾಲಿಕ ಮಳೆಯಿಂದ ಮೀನುಗಾರಿಕೆ ವಹಿವಾಟು ಸ್ಥಗಿತ: ಮಾರುಕಟ್ಟೆಯಲ್ಲಿ ಮೀನುಗಳಿಗೆ ಬರ, ಇದ್ದ ಮೀನಿನ ಬೆಲೆಯೂ ಹೆಚ್ಚಳ

ಅಕಾಲಿಕ ಮಳೆಯಿಂದ ಮೀನುಗಾರಿಕೆ ವಹಿವಾಟು ಸ್ಥಗಿತ: ಮಾರುಕಟ್ಟೆಯಲ್ಲಿ ಮೀನುಗಳಿಗೆ ಬರ, ಇದ್ದ ಮೀನಿನ ಬೆಲೆಯೂ ಹೆಚ್ಚಳ
By Published : October 30, 2025 at 7:49 AM IST

ಮಲ್ಪೆ: ಈ ವರ್ಷದ ಮಳೆಗಾಲ ಇನ್ನೂ ನಿಂತಿಲ್ಲ. ಅಕಾಲಿಕ ಮಳೆಯು ಮೀನುಗಾರಿಕೆ ಮತ್ತು ಕೃಷಿ ಕಾರ್ಯಕ್ಕೆ ಸಾಕಷ್ಟು ತೊಂದರೆ ಉಂಟುಮಾಡಿದೆ. ಚಂಡಮಾರುತದಿಂದಾಗಿ ಕಳೆದ ಐದಾರು ದಿನಗಳಿಂದ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಸಮುದ್ರಗಳಲ್ಲಿ ಬಲವಾದ ಗಾಳಿ ಬೀಸುತ್ತಿದೆ. ಮಂಗಳೂರು, ಮಲ್ಪೆ, ಗಂಗೊಳ್ಳಿ, ಭಟ್ಕಳ, ಕಾರಾವರ, ಹೊನ್ನಾವರ, ತದಡಿ ಎಲ್ಲ ಕಡೆ ಬಹುತೇಕ ಮೀನುಗಾರರು ಕಡಲಿಗಿಳಿಯುತ್ತಿಲ್ಲ. ಹೀಗಾಗಿ ಮೀನುಗಾರಿಕಾ ವಹಿವಾಟು ವಲಯದಲ್ಲಿ ಭಾರಿ ಹಿನ್ನಡೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಬೇಸರ ಹೊರಹಾಕಿದ್ದಾರೆ.

ಬಹುತೇಕ ಪರ್ಸೀನ್, ಟ್ರಾಲ್‌ಬೋಟು, ಸಣ್ಣ ಟ್ರಾಲ್​ಬೋಟುಗಳು ವಾರದಿಂದ ದಡದಲ್ಲೇ ಲಂಗರು ಹಾಕಿದ ಸ್ಥಿತಿಯಲ್ಲಿವೆ. ನಾಡದೋಣಿಗಳು ಕಡಲಿಗೆ ಇಳಿದಿಲ್ಲ. ಬಹುತೇಕ ಆಳ ಸಮುದ್ರದ ಬೋಟುಗಳು ಆಯಾಯ ಬಂದರಿನಲ್ಲಿ ಠಿಕಾಣಿ ಹೂಡಿದ್ದರೆ, ಇನ್ನು ಕೆಲವೊಂದು ಸಮೀಪದ ಬಂದರಿನಲ್ಲಿವೆ. ಇಂದು ಚಂಡಮಾರುತದ ಪ್ರಭಾವ ಕಡಿಮೆಯಾಲಿದ್ದು, ಆ ಬಳಿಕ ಕಡಲಿಗಿಳಿಯುವ ಸಾಧ್ಯತೆ ಇದೆ ಎಂದು ಮೀನುಗಾರರು ಆಶಯ ವ್ಯಕ್ತಪಡಿಸಿದ್ದಾರೆ. ಕಾರವಾರ ಸೇರಿದಂತೆ ಸಮೀಪದ ಬಂದರು ಆಶ್ರಯಿಸಿದ ಮಲ್ಪೆ ಬಂದರಿನ ಆಳಸಮುದ್ರ ಬೋಟು ಗಾಳಿಯ ಒತ್ತಡ ಕಡಿಮೆಯಾದ ಮೇಲೆ ಬಂದರಿಗೆ ಆಗಮಿಸಲಿದೆ.

ಚಂಡಮಾರುತದ ಪ್ರಭಾವ ಇರಲಿದೆ ಎಂದು ಸೂಚನೆ ಹವಾಮಾನ ಇಲಾಖೆ ನೀಡಿದೆಯಾದರೂ ಗಾಳಿಯ ವೇಗ ಈಗ ಉತ್ತರ ದಿಕ್ಕಿಗೆ ಸಾಗಿದೆ. ಇಂದು ಅಥವಾ ನಾಳೆ ಬೋಟುಗಳು ನಿಧಾನವಾಗಿ ಕಡಲಿಗೆ ಇಳಿಯಬಹುದು ಎಂದು ಮೀನುಗಾರರಾದ ಕೃಷ್ಣ ಎಸ್‌. ಸುವರ್ಣ ತಿಳಿಸಿದ್ದಾರೆ. ರಾಜ್ಯದ ಕರಾವಳಿಯೆಲ್ಲೆಡೆ ಮೀನುಗಾರರು ಕಡಲಿಗಿಳಿಯದ ಕಾರಣ ಮಾರುಕಟ್ಟೆಯಲ್ಲಿ ಮೀನಿಲ್ಲ. ಇದ್ದ ಮೀನಿನ ಬೆಲೆಯೂ ಸಿಕ್ಕಾಪಟ್ಟೆ ಹೆಚ್ಚಾಗಿದೆ.

ಮೀನು ಪ್ರಿಯರಿಗೆ, ಮಾಂಸಾಹಾರಿ ಹೋಟಲ್​ ಮಾಲೀಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ. ಹೊರಬಂದರಿನಲ್ಲಿ ತಂಗಿದ್ದ ಕೆಲವೊಂದು ಆಳಸಮುದ್ರ ಬೋಟುಗಳ ಅಲ್ಪಸ್ವಲ್ಪ ಮೀನುಗಳು ಮಾರಾಟಕ್ಕೆ ಸಿಗುತ್ತವೆ. ಮುರುಮೀನು, ಡಿಸ್ಕೋ, ಬಂಗುಡೆ, ಪಾಂಫ್ರೆಟ್‌ಗಳಿಗೆ ಸಿಕ್ಕಾಪಟ್ಟೆ ದರ ಇದೆ. ಸಾಕಾಣಿಕೆಯ ಸಿಗಡಿ, ಹೊಳೆ ಮೀನು, ಕಂಡಿಗೆ, ಗಾಳದ ಮೀನುಗಳನ್ನು ಮಾರಾಟ ಮಾಡಲಾಗುತ್ತದೆ. ಮೀನಿನ ದರ ಜಾಸ್ತಿ ಎಂದು ಕೆಲವರು ಖರೀದಿಸಲು ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.

ಸಾಲ್ಯಾನ್. ಒಂದು ತಿಂಗಳಿನಿಂದ ಸಮುದ್ರದಲ್ಲಿ ಮೀನಿನ ಲಕ್ಷಣ ಕಡಿಮೆ ಇತ್ತು. ಚಂಡಮಾರುತದಿಂದ ಸಮುದ್ರದ ನೀರಿನಲ್ಲಿ ಬದಲಾವಣೆ ಉಂಟಾಗಿದ್ದು, ಮತ್ಸ್ಯ ಸಂಪತ್ತಿಗೆ ಇದು ಪೂರಕ. ಈ ನಿಟ್ಟಿನಲ್ಲಿ ಉತ್ತಮ ಮೀನುಗಾರಿಕೆ ಆಗುವ ನಿರೀಕ್ಷೆ ಇದೆ ಎನ್ನುತ್ತಾರೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಾಕರ್. ಹವಾಮಾನ ಇಲಾಖೆಯ ಸೂಚನೆ ಪ್ರಕಾರ ಇನ್ನೂ ಚಂಡಮಾರುತದ ಲಕ್ಷಣ ಇದೆ.

ಸಮುದ್ರದ ನೀರಿನ ಒತ್ತಡ ಹೆಚ್ಚಿರುವುದರಿಂದ ಮೀನುಗಾರರಿಗೆ ಮೀನಿಗೆ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಮುದ್ರ ಸಹಜ ಸ್ಥಿತಿಗೆ ತಲುಪಿದ ಬಳಿಕ ಬೋಟುಗಳು ಕಡಲಿಗಿಳಿಯುವ ಸಾಧ್ಯತೆಗಳಿವೆ.

📚 Related News