ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರೀತಿಯೇ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಹುಲಿ ಉಟಪಳ ಹೆಚ್ಚಾಗಿದ್ದು, ಚಾಮರಾಜನಗರ ತಾಲೂಕಿನ ಮೂರು ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ಹುಲಿ ಸೆರೆ ಕೂಂಬಿಂಗ್ ನಡೆಸುತ್ತಿದೆ. ಚಾಮರಾಜನಗರ ತಾಲೂಕಿನ ಹೆಗ್ಗೋಠಾರ, ಕಲ್ಪುರ ಹಾಗೂ ಉಗೇನದಹುಂಡಿ ಗ್ರಾಮಗಳ ಜಮೀನಿನಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಟೈಗರ್ ಆಪರೇಷನ್ಗೆ 'ವಾಕ್ ಥ್ರೂ ಕೇಜ್' ಎಂಬ ವಿಶೇಷ ಬೋನ್ ಅಳವಡಿಸಲಾಗಿದೆ. ವಾಕ್ ಥ್ರೂ ಕೇಜ್ ಹೇಗಿದೆ? ಹುಲಿ ಓಡಾಟದ ಹಾದಿಯಲ್ಲಿ ಈ ಬೋನ್ನ್ನು ಅಳವಡಿಸಲಿದ್ದು, ಹುಲಿ ಕಾಲಿಟ್ಟ ಕೂಡಲೇ ಎರಡು ಕಡೆಯಿಂದ ಬಾಗಿಲು ಬಂದ್ ಆಗಿ ಹುಲಿಯನ್ನು ಬಲೆಗೆ ಬೀಳಿಸುವ ತಾಂತ್ರಿಕತೆ ಇದರದ್ದಾಗಿದೆ. 30 ಅಡಿ ಉದ್ದ 10 ಅಡಿ ಎತ್ತರದ ಡಬಲ್ ಡೋರ್ ಕೇಜ್ ಇದಾಗಿದೆ.
ಮೈಸೂರಿನಿಂದ ಅರಣ್ಯ ಇಲಾಖೆಯು ಈ ಬೋನ್ನ್ನು ಹುಲಿ ಸೆರೆಗಂತಲೇ ತರಿಸಿಕೊಂಡಿದೆ. ಸಾಮಾನ್ಯವಾದ ದಾರಿ ಎಂದು ಭಾವಿಸಿ ಹುಲಿ ಒಂದೇ ಒಂದು ಹೆಜ್ಜೆ ಇಡ್ತಾಯಿದ್ದಂತೆ, ಎರಡೂ ಬಾಗಿಲು ಬಂದ್ ಆಗಲಿವೆ. ಚಾಮರಾಜನಗರ ತಾಲೂಕಿನ ಉಗೇದನಹುಂಡಿ ಜಮೀನೊಂದರಲ್ಲಿ ಈ ಬೋನ್ ಇರಿಸಲಾಗಿದೆ. ಹುಲಿ ಓಡಾಟ ಅರಿಯಲು 20ಕ್ಕೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಲ್ಲಿ ವ್ಯಾಘ್ರನ ಸಂಚಾರದ ದೃಶ್ಯವು ಸೆರೆಯಾಗಿದೆ.
80ಕ್ಕೂ ಅಧಿಕ ಸಿಬ್ಬಂದಿ ಈ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹುಲಿ ಹಾಗೂ ಚಿರತೆಗಳ ಸುಳಿವು ದೊರೆತ ಕೂಡಲೇ ತುರ್ತು ಕಾರ್ಯಾಚರಣೆ ಕೈಗೊಳ್ಳಲು ಒಂದು ತಂಡವು ಸಿದ್ಧವಾಗಿದೆ. ಹುಲಿ ಸೆರೆ ಕಾರ್ಯಾಚರಣೆ ಕುರಿತು ಬಿಆರ್ಟಿ ಎಸಿಎಫ್ ಮಂಜುನಾಥ್ ಪ್ರತಿಕ್ರಿಯಿಸಿ, ''ಎನ್ಟಿಸಿಎ ಮಾರ್ಗಸೂಚಿಯಂತೆ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಂಡು ಕೂಂಬಿಂಗ್ ನಡೆಸಲಾಗುತ್ತಿದೆ. ಕೆಲ ರೈತರು ಜಮೀನಿಗೆ ತೆರಳಲು ಭಯಪಡುವ ಆತಂಕ ಹೊರಹಾಕಿದ ಹಿನ್ನೆಲೆಯಲ್ಲಿ, ಅವರಿಗೂ ರಕ್ಷಣೆ ಕೊಡಲಾಗಿದೆ. ಗ್ರಾಮಸ್ಥರಿಗೆ ಕೂಂಬಿಂಗ್ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ'' ಎಂದು ತಿಳಿಸಿದರು.
ಇತ್ತೀಚೆಗಿನ ಘಟನೆ: ಇತ್ತೀಚೆಗೆ, ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಹೋಬಳಿಯ ಮುಳ್ಳೂರುಹುಂಡಿ-ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ನಡೆದಿತ್ತು. ಬೆಣ್ಣೆಗೆರೆ ಗ್ರಾಮದ ರಾಜಶೇಖರ್ (55) ಹುಲಿ ದಾಳಿಗೆ ಬಲಿಯಾದ ರೈತ. ರಾಜಶೇಖರ್ ಹಾಗೂ ಸಿದ್ದರಾಮೇಗೌಡ (50) ಇವರಿಬ್ಬರು, ಬೆಣ್ಣೆಗೆರೆ ಗ್ರಾಮದ ಬೇರೆಯವರ ಜಮೀನಿನಲ್ಲಿ ಟೊಮೆಟೊ ಬಿಡಿಸಲು ಹೋಗಿದ್ದರು. ಟೊಮೆಟೊ ಬಿಡಿಸಿ ನಂತರ ಊಟಕ್ಕೆ ಮನೆಗೆ ಹೋಗುವಾಗ, ಪೊದೆಯಲ್ಲಿ ಅವತ್ತಿದ್ದ ಹುಲಿ ಇಬ್ಬರ ಮೇಲೆ ಎರಗಿದೆ. ಈ ವೇಳೆ ಸಿದ್ದರಾಮೇಗೌಡ ಜೋರಾಗಿ ಕಿರುಚಿಕೊಂಡು ದೂರಕ್ಕೆ ಓಡಿಹೋದರೆ, ರಾಜಶೇಖರ್ ಹುಲಿ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.







