ಮೈಸೂರು ದಸರಾ: ಈ ಬಾರಿ ದಸರಾದಲ್ಲಿ ಭಾಗವಹಿಸಲಿರುವ ಅತ್ಯಂತ ಕಿರಿಯ ಆನೆ ಹೇಮಾವತಿ ಬಗ್ಗೆ ನಿಮಗೆಷ್ಟು ಗೊತ್ತು?

ಮೈಸೂರು ದಸರಾ: ಈ ಬಾರಿ ದಸರಾದಲ್ಲಿ ಭಾಗವಹಿಸಲಿರುವ ಅತ್ಯಂತ ಕಿರಿಯ ಆನೆ ಹೇಮಾವತಿ ಬಗ್ಗೆ ನಿಮಗೆಷ್ಟು ಗೊತ್ತು?
By Published : September 9, 2025 at 4:54 PM IST

ಮೈಸೂರು : ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಗಜಪಡೆಯಾಗಿದ್ದು, ಗಜಪಡೆಯ ಜಂಬೂಸವಾರಿ ಸರಾಗವಾಗಿ ಸಾಗಲು ಹೆಣ್ಣಾನೆಯ ಪಾತ್ರ ಪ್ರಮುಖವಾಗಿದೆ. ಈ ಬಾರಿ ನಾಡಹಬ್ಬ ದಸರಾದಲ್ಲಿ ಅತ್ಯಂತ ಕಿರಿಯ ಹೆಣ್ಣಾನೆಯಾದ ಹೇಮಾವತಿ (11) ಭಾಗವಹಿಸಲಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ.

ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊತ್ತು ಸಾಗುವ ಗಂಡು ಆನೆಗೆ ಸಾತ್ ನೀಡುವ ಹೆಣ್ಣು ಆನೆಗಳೇ ಕುಮ್ಕಿ ಆನೆಗಳು. ಈ ಆನೆಗಳು ಚಿನ್ನದ ಅಂಬಾರಿ ಹೊತ್ತು ಶಾಂತವಾಗಿ ಸಾಗಲು ಪ್ರಮುಖ ಪಾತ್ರವಹಿಸಲಿವೆ. ಈ ಬಾರಿ ನಾಡಹಬ್ಬದಲ್ಲಿ 14 ಗಜಪಡೆಗಳು ಆಗಮಿಸಿದ್ದು, ಅದರಲ್ಲಿ 10 ಗಂಡು ಆನೆಗಳು ಹಾಗೂ 4 ಹೆಣ್ಣು ಆನೆಗಳು ಭಾಗವಹಿಸಿವೆ. ಅದರಲ್ಲಿ ಅತ್ಯಂತ ಕಿರಿಯ ವಯಸ್ಸಿನ 11 ವರ್ಷದ ಹೇಮಾವತಿ, ಅತ್ಯಂತ ಹಿರಿಯ ವಯಸ್ಸಿನ ಹೆಣ್ಣು ಆನೆ ಲಕ್ಷ್ಮಿ, ಕಾವೇರಿ ಹಾಗೂ ರೂಪಾ ಎಂಬ 4 ಹೆಣ್ಣಾನೆಗಳು ಈ ಬಾರಿ ದಸರಾದಲ್ಲಿ ಭಾಗವಹಿಸಿವೆ.

ಈ ಹೆಣ್ಣು ಆನೆಗಳು ಗಂಡು ಆನೆಗಳ ಜೊತೆಯಲ್ಲಿ ತಾಲೀಮು ಮಾಡುವುದರಿಂದ ಗಂಡು ಆನೆಗಳು ಗಾಬರಿಯಾಗದಂತೆ ಸರಾಗವಾಗಿ ಸಾಗಲು ಅನುವು ಮಾಡಿಕೊಡುತ್ತವೆ.

ಅತ್ಯಂತ ಕಿರಿಯ ಆನೆ ಹೇಮಾವತಿ : ಗಜಪಡೆಯ ಭಾರ ಹೊರುವ ತಾಲೀಮಿನಲ್ಲಿ ಅಭಿಮನ್ಯು ಜೊತೆ ಹೇಮಾವತಿ ಆನೆ ಭಾಗವಹಿಸಿದೆ. ಈ ಆನೆ ಭವಿಷ್ಯದಲ್ಲಿ ಜಂಬೂಸವಾರಿಯಲ್ಲಿ ಕುಮ್ಕಿ ಆನೆಯಾಗಿ ಬಹಳ ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ ಹಾಗೂ ಹೆಣ್ಣು ಆನೆಗಳ ಕೊರತೆ ನಿಭಾಯಿಸಲಿದೆ ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರು ಇದನ್ನು ಕರೆಸಿದ್ದಾರೆ.

ಹೇಮಾವತಿ ಆನೆಯ ಬಯೋ ಡೇಟಾ ನೋಡುವುದಾದರೆ, 2014ರಲ್ಲಿ ಕೊಡಗಿನ ಆನೆ ಶಿಬಿರದಲ್ಲಿ ಜನಿಸಿರುವ ಈ ಹೇಮಾವತಿ ಆನೆ, ಶಿಬಿರದಲ್ಲಿ ಮಾವುತರು ಹಾಗೂ ಕಾವಾಡಿಗಳ ತರಬೇತಿಯಿಂದ ಶಿಸ್ತು ಮತ್ತು ಶಾಂತ ಸ್ವಭಾವದಿಂದ ಗಮನ ಸೆಳೆದಿದೆ. ಆದ್ದರಿಂದಲೇ ಮೊದಲ ಬಾರಿಗೆ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಈ ಆನೆಯನ್ನು ಕರೆತರಲಾಗಿದೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ.

ಇತರ ಹೆಣ್ಣು ಆನೆಗಳು : ಬಳ್ಳೆ ಆನೆ ಶಿಬಿರದ ಲಕ್ಷ್ಮಿ ಆನೆ ಈ ಬಾರಿ ದಸರಾದಲ್ಲಿ ಭಾಗವಹಿಸಲಿರುವ ಅತಿ ಹಿರಿಯ ಆನೆಯಾಗಿದೆ. ಕಳೆದ ಬಾರಿ ದಸರಾದಲ್ಲಿ ಕುಮ್ಕಿ ಆನೆಯಾಗಿ ಭಾಗವಹಿಸಿದ್ದ ಲಕ್ಷ್ಮಿ ಆನೆಗೆ ಈಗ 54 ವರ್ಷ. ಈ ಆನೆ ಅತ್ಯಂತ ಹಿರಿಯ ಹೆಣ್ಣು ಆನೆಯಾಗಿದ್ದು, ಇದು ಸರ್ಕಸ್​​​ನಲ್ಲಿಯೂ ಬಳಕೆಯಾಗುತ್ತಿತ್ತು. ಆನಂತರ 2015ರಲ್ಲಿ ಈ ಆನೆಯನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅಲ್ಲಿ ಪಳಗಿದ ನಂತರ ಎರಡು ಬಾರಿ ಮೈಸೂರು ದಸರಾದಲ್ಲಿ ಭಾಗವಹಿಸಿದೆ.

ಇದಲ್ಲದೇ, ಕಳೆದ ಹಲವು ವರ್ಷಗಳಿಂದ ಕುಮ್ಕಿ ಆನೆಯಾಗಿ ಭಾಗವಹಿಸುತ್ತಾ ಬಂದಿರುವ 45 ವರ್ಷದ ಕಾವೇರಿ ಆನೆ ಶಾಂತ ಹಾಗೂ ಸೌಮ್ಯ ಸ್ವಭಾವದ ಆನೆಯಾಗಿದ್ದು, ಈ ಬಾರಿಯೂ ಸಹ ಕುಮ್ಕಿ ಆನೆಯಾಗಿ ಭಾಗವಹಿಸುವ ಸಾಧ್ಯತೆ ಇದೆ.

ಇದಲ್ಲದೇ ಪ್ರಥಮ ಬಾರಿಗೆ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ 44 ವರ್ಷದ ರೂಪಾ ಆನೆಗೆ ಭವಿಷ್ಯದಲ್ಲಿ ಕುಮ್ಕಿ ಆನೆಯಾಗಿ ತರಬೇತಿ ನೀಡುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

ಡಿಸಿಎಫ್ ಪ್ರಭುಗೌಡ ಹೇಳಿದ್ದೇನು ?: 'ಈ ಬಾರಿ ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಒಟ್ಟು 14 ಆನೆಗಳು ಆಗಮಿಸಿವೆ. ಅದರಲ್ಲಿ 4 ಹೆಣ್ಣು ಆನೆಗಳಿವೆ. ಮುಖ್ಯವಾಗಿ ಅತ್ಯಂತ ಕಿರಿಯ ವಯಸ್ಸಿನ ಹೇಮಾವತಿ (11) ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದ್ದು, ಈ ಹೇಮಾವತಿ ಆನೆ ಅರಣ್ಯ ಇಲಾಖೆಯ ಆನೆ ಶಿಬಿರದಲ್ಲೇ ಹುಟ್ಟಿದೆ. ಇದನ್ನು ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಲು ಕರೆತರಲಾಗಿದ್ದು, ಭವಿಷ್ಯದಲ್ಲಿ ಹೆಣ್ಣು ಆನೆಗಳ ಕೊರತೆ ತುಂಬುವುದರ ಜೊತೆಗೆ ಅತೀ ಹೆಚ್ಚು ವರ್ಷ ದಸರಾದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ' ಎಂದು ತಿಳಿಸಿದ್ದಾರೆ.

📚 Related News