ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಹರಿಯಾಣದ ಅಂಬಾಲಾ ವಾಯುಪಡೆ ನಿಲ್ದಾಣದಲ್ಲಿ ಅವರು ಹಾರಾಟ ನಡೆಸುವ ಮೂಲಕ ಐಎಎಫ್ನ ಅತ್ಯಾಧುನಿಕ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಷ್ಟ್ರಪತಿ ಭವನ, ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹರಿಯಾಣದ ಅಂಬಾಲಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ರಫೇಲ್‌ನಲ್ಲಿ ಹಾರಾಟ ನಡೆಸಲಿದ್ದಾರೆ ಎಂದು ತಿಳಿಸಿದೆ. ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿಗಳು, 2023ರ ಏಪ್ರಿಲ್ 8ರಂದು ಅಸ್ಸಾಂನ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್ -30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ರಾಷ್ಟ್ರಪತಿಗಳು ಅಕ್ಟೋಬರ್ 18 ರಂದು ಅಂಬಾಲಕ್ಕೆ ಭೇಟಿ ನೀಡಬೇಕಿತ್ತು, ಆದರೆ ಅನಿರೀಕ್ಷಿತ ಕಾರಣಗಳಿಂದಾಗಿ ಅವರ ಭೇಟಿ ಮುಂದೂಡಬೇಕಾಯಿತು.
ಇಂದು ಅವರು ಭಾರತೀಯ ವಾಯುಪಡೆಯ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಈಗ ರಫೇಲ್ ಯುದ್ಧ ವಿಮಾನಗಳ ನೆಲೆಯಾಗಿದೆ. ರಫೇಲ್ ಜೆಟ್ ಅನ್ನು 4. 5ನೇ ಪೀಳಿಗೆಯ ಯುದ್ಧ ವಿಮಾನ ಎಂದು ಪರಿಗಣಿಸಲಾಗಿದೆ ಬಹು-ಪಾತ್ರ ಸಾಮರ್ಥ್ಯದೊಂದಿಗೆ ಸಾಟಿಯಿಲ್ಲದ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಸಂವೇದಕಗಳಿಂದ ಶಸ್ತ್ರಸಜ್ಜಿತವಾಗಿದೆ. ಆಪರೇಷನ್ ಸಿಂಧೂರ್ ವೇಳೆ ಈ ಯುದ್ದ ವಿಮಾನವನ್ನು ಬಳಕೆ ಮಾಡಲಾಗಿತ್ತು.
ಫ್ರಾನ್ಸ್ನ ಡಸಾಲ್ಟ್ ಕಂಪನಿಯಿಂದ ರಫೇಲ್ ಫೈಟರ್ ಜೆಟ್ಗಳನ್ನು ಭಾರತ ಪಡೆದುಕೊಂಡಿದೆ. ಡಸಾಲ್ಟ್ ಕಂಪನಿಯು ಭಾರತೀಯ ನೌಕಾಪಡೆಗೆ ಇನ್ನೂ 26 ವಿಮಾನಗಳನ್ನು ನೀಡುವುದು ಬಾಕಿ ಇದೆ. ಡಸಾಲ್ಟ್ ಕಂಪನಿಯು ವರ್ಷಕ್ಕೆ 24 ವಿಮಾನಗಳನ್ನು ಮಾತ್ರ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಭಾರತದಲ್ಲಿ ಜಂಟಿ ಉದ್ಯಮವಾದ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ ನಲ್ಲಿ ಹೆಚ್ಚುವರಿ ಉತ್ಪಾದನಾ ಮಾರ್ಗವನ್ನು ಸ್ಥಾಪಿಸುವ ಸಾಧ್ಯತೆಯಿದೆ ಎಂದು ಐಎಎನ್ಎಸ್ ವರದಿ ಮಾಡಿದೆ. ಭಾರತ ಯುದ್ದ ವಿಮಾನ ಖರೀದಿಯ ಬೃಹತ್ ಮಾರುಕಟ್ಟೆಯಾಗಿದೆ. ಭಾರತೀಯ ವಾಯುಪಡೆಯು 114 ಯುದ್ಧ ವಿಮಾನಗಳನ್ನು ಖರೀದಿಸಲು ಯೋಜಿಸಿದೆ.
ಮುಂದಿನ ಆರು ತಿಂಗಳಲ್ಲಿ ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಗಳಿವೆ. ಬಾಕಿ ಉಳಿದಿರುವ 26 ವಿಮಾನಗಳು ಭಾರತೀಯ ನೌಕಾಪಡೆಯ ಆದೇಶದಂತೆ ಮುಂದಿನ ಆರು ತಿಂಗಳೊಳಗೆ ಅಂತಿಮಗೊಳ್ಳುವ ನಿರೀಕ್ಷೆಯಿದ್ದು, 2027ರಲ್ಲಿ ಇದರ ವಿತರಣೆ ನಡೆಯಲಿದೆ.








