ಬೆಂಗಳೂರು : ಬೈಕ್, ಸ್ಕೂಟರ್‌ಗಳನ್ನ ಕಳ್ಳತನ ಮಾಡಿ ವೀಲಿಂಗ್ ಮಾಡುತ್ತಿದ್ದ ಆರೋಪಿಯನ್ನ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್ ಗಾರ್ಡನ್ ನಿವಾಸಿ ಸಲೀಂ ಪಾಷಾ (24) ಬಂಧಿತ ಆರೋಪಿಯಾಗಿದ್ದು, ಆತನಿಂದ 18 ಲಕ್ಷ ರೂ ಮೌಲ್ಯದ 20 ದ್ವಿಚಕ್ರ ವಾಹನಗಳು ಹಾಗೂ 1 ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷಣ ಮಾತ್ರದಲ್ಲಿ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿಯುತ್ತಿದ್ದ ಆರೋಪಿ, ಅವುಗಳನ್ನ ಬಳಸಿ ವೀಲಿಂಗ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದ. ನಂತರ ಆ ದ್ವಿಚಕ್ರ ವಾಹನಗಳನ್ನ ಅಜ್ಞಾತ ಸ್ಥಳಗಳಲ್ಲಿ ಪಾರ್ಕ್ ಮಾಡುತ್ತಿದ್ದ. ಇನ್ನು ಮನೆಗೆ ಹೋದರೆ ಪೊಲೀಸರು ಹುಡುಕಿಕೊಂಡು ಬರಬಹುದು ಎಂದು ಕದ್ದ ಆಟೋದಲ್ಲಿಯೇ ವಾಸ್ತವ್ಯ ಹೂಡಿದ್ದ. ಇತ್ತೀಚಿಗೆ ಜಯನಗರ 2ನೇ ಬ್ಲಾಕ್‌ನ ಆರ್. ವಿ. ಟೀಚರ್ಸ್ ಕಾಲೋನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಆರೋಪಿ ಎಗರಿಸಿಕೊಂಡು ಪರಾರಿಯಾಗಿದ್ದ. ದ್ವಿಚಕ್ರ ವಾಹನದ ಮಾಲೀಕ ನೀಡಿದ್ದ ದೂರಿನ ಅನ್ವಯ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಆರೋಪಿ ಬಂಧನದಿಂದ ಕೆ. ಆರ್. ಪುರಂ, ವಿಲ್ಸನ್ ಗಾರ್ಡನ್, ಅಶೋಕನಗರ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನಗಳ ಮಾಲೀಕರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು: ಮಾಲೀಕರು ಮುನ್ನೆಚ್ಚರಿಕೆ ವಹಿಸದೇ ಎಲ್ಲೆಂದರಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದು, ವಾಹನದಲ್ಲಿ ಕೀ ಬಿಟ್ಟು ಹೋಗುವುದು, ಸುಲಭವಾಗಿ ಮುರಿಯಬಹುದಾದ ಹ್ಯಾಂಡಲ್ ಲಾಕ್ ಬಳಸುವುದು ಹಾಗೂ ಕತ್ತಲು ಪ್ರದೇಶಗಳಲ್ಲಿ ವಾಹನಗಳನ್ನ ನಿಲ್ಲಿಸುತ್ತಿರುವುದು ಬೈಕ್ ಕಳವು ಹೆಚ್ಚಾಗಲು ಕಾರಣವಾಗುತ್ತಿದೆ. ಸಾಧ್ಯವಾದಷ್ಟು ಸಿಸಿಟಿವಿ ನಿಗಾವಣೆಯಿರುವ ಸ್ಥಳಗಳಲ್ಲಿ ತಮ್ಮ ವಾಹನಗಳನ್ನ ನಿಲ್ಲಿಸಬೇಕು. ಕಳ್ಳರು ನಕಲಿ ಕೀ ಬಳಸಿದರೆ ಅಥವಾ ಸರ್ಕ್ಯೂಟ್ ಬ್ರೇಕ್ ಮಾಡಿದಾಗ ಅಲರ್ಟ್ ಆಗುವಂತೆ ಸೈರನ್ ಅಳವಡಿಸಿಕೊಳ್ಳಬೇಕು. ಆದ್ದರಿಂದ ದ್ವಿಚಕ್ರ ವಾಹನಗಳ ಕಳವು ಸಾಧ್ಯತೆಯೂ ಕಡಿಮೆ ಹಾಗೂ ಕಳವಾದಾಗ ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನದ ಆರೋಪಿ ಬಂಧನ (ಪ್ರತ್ಯೇಕ ಸುದ್ದಿ) : ಮದುವೆ ಸಮಾರಂಭಗಳ ಸಂದರ್ಭದಲ್ಲಿ ಕಲ್ಯಾಣ ಮಂಟಪ, ಕನ್ವೆನ್ಷನ್ ಸೆಂಟರ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಆಗಸ್ಟ್ 26, 2025 ರಂದು ಬಂಧಿಸಿದ್ದರು. ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಪರಮೇಶ್ ಬಂಧಿತ ಆರೋಪಿ. ಆತನಿಂದ 400 ಗ್ರಾಂ ಚಿನ್ನಾಭರಣ, 91 ಸಾವಿರ ನಗದು ಸಹಿತ ಒಟ್ಟು 36.91 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.