'ಕಾಂತಾರ ಚಾಪ್ಟರ್ 1' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಸಿನಿಮಾದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅವರೊಂದಿಗೆ ಅಮಿತಾಬ್ ಬಚ್ಚನ್ ನಡೆಸಿಕೊಟ್ಟ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಇತ್ತೀಚೆಗೆ ಪ್ರಸಾರವಾಗಿದೆ. ಈ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರು ರಾಜ್ ಕುಮಾರ್ ಅವರನ್ನು ನೆನೆದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಿಷಬ್ ಶೆಟ್ಟಿ ಅವರು ಕೌನ್ ಬನೇಗಾ ಕರೋಡ್ಪತಿ ಹಾಟ್ ಸೀಟಲ್ಲಿ ಕುಳಿತು, ಅಮಿತಾಬ್ ಬಚ್ಚನ್ ಅವರಿಗೆ ರಾಜ್ಕುಮಾರ್ ಅವರ ಜೊತೆಗಿನ ನೆನಪುಗಳ ಬಗ್ಗೆ ಕೇಳಿದರು. ಆಗ ಅಮಿತಾಬ್, ಅಣ್ಣಾವ್ರನ್ನು ಭೇಟಿ ಮಾಡಿದ್ದು, ಅವರ ಜೊತೆಗಿನ ಒಡನಾಟ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಕೂಲಿ ಸಿನಿಮಾದ ಶೂಟಿಂಗ್ ಸಮಯದಲ್ಲಿ ಆದ ಅಪಘಾತದಲ್ಲಿ ಗಾಯಗೊಂಡ ಸಂದರ್ಭದಲ್ಲಿ, ಶೀಘ್ರ ಚೇತರಿಕೆಗಾಗಿ ದೇವಸ್ಥಾನದ ಸುತ್ತ ಉರುಳು ಸೇವೆ ಮಾಡಿದ್ದನ್ನು ನೆನಪಿಸಿಕೊಂಡರು. ರಾಜ್ಕುಮಾರ್ ಅವರ ಸರಳ ಸ್ವಭಾವದ ಬಗ್ಗೆ ಮಾತನಾಡಿದ ಬಿಗ್ ಬಿ, "ಅದನ್ನು ವಿವರಿಸಲು ನನ್ನಿಂದ ಸಾಧ್ಯವಿಲ್ಲ. ಕರ್ನಾಟಕದ ಜನರಿಗೆ ರಾಜ್ಕುಮಾರ್ ಅವರು ದೇವರಂತೆ. ಆದರೆ ನಾನು ಅವರನ್ನು ಭೇಟಿಯಾದಾಗ ತುಂಬಾ ಸರಳ, ಎಂದರೆ ತುಂಬಾ ಸರಳ ವ್ಯಕ್ತಿಯಾಗಿದ್ದರು. ಡೌನ್ ಟು ಅರ್ತ್ ವ್ಯಕ್ತಿ.
ಸರಳವಾದ ಬಟ್ಟೆ ಧರಿಸಿ, ಕುಳಿತುಕೊಂಡಿರುತ್ತಿದ್ದರು. ತುಂಬಾ ಸರಳವಾದ ಮನೆಯಲ್ಲಿ ವಾಸಿಸುತ್ತಿದ್ದರು. ಅವರನ್ನು ನೋಡಿದರೆ ಅವರೊಬ್ಬ ದೊಡ್ಡ ಸ್ಟಾರ್, ಅಷ್ಟೊಂದು ಜನ ಇಷ್ಪಡುವಂತಹ ವ್ಯಕ್ತಿ ಎಂದು ಹೇಳಲು ಸಾಧ್ಯವಿಲ್ಲ. ಆ ರೀತಿ ಇದ್ದರು" ಎಂದು ಹೇಳಿದರು. "1982ರಲ್ಲಿ ನಾನು ಕೂಲಿ ಚಿತ್ರದ ಶೂಟಿಂಗ್ ಸೆಟ್ನಲ್ಲಿದ್ದಾಗ ಅಪಘಾತವಾಗಿತ್ತು.
ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿತ್ತು, ಅಲ್ಲೇ ಅಪಘಾತವಾಗಿತ್ತು. ಆ ನಂತರದಲ್ಲಿ ತುಂಬಾ ವಿಷಯಗಳು ನಡೆದವು. ತುಂಬಾ ಜನ ನಾನು ಶೀಘ್ರ ಗುಣಮುಖವಾಗುವಂತೆ ಪ್ರಾರ್ಥಿಸಿದರು. ಆದರೆ ರಾಜ್ ಕುಮಾರ್ ಅವರು, ಕರ್ನಾಟಕದಲ್ಲಿ ಅವರು ಹೋಗುತ್ತಿದ್ದಂತಹ ಒಂದು ವಿಶೇಷ ದೇವಸ್ಥಾನವಿದೆ. ಅವರು ಆ ದೇವಸ್ಥಾನಕ್ಕೆ ಹೋಗಿ, ಒದ್ದೆ ಬಟ್ಟೆಯಲ್ಲಿ ದೇವಸ್ಥಾನದ ಸುತ್ತ ಉರುಳುಸೇವೆ ಮಾಡಿ, ನನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದರು" ಎಂದು ನೆನಪಿಸಿಕೊಂಡರು.
ಆಗಿನಿಂದ ಅವರು ಸಾಯುವವರೆಗೂ ನಮ್ಮ ಮಧ್ಯೆ ಒಂದು ವಿಶೇಷ ಬಾಂಧವ್ಯವಿತ್ತು. ಅವರ ಮಕ್ಕಳ ಜೊತೆಗೂ ನನಗೆ ಒಡನಾಟವಿತ್ತು. ಆಗ ತುಂಬಾ ಸಣ್ಣವರಿದ್ರು, ಈಗ ಅವರೆಲ್ಲರೂ ಸ್ಟಾರ್ಗಳಾಗಿದ್ದಾರೆ. ಯಾವಾಗ ಅಲ್ಲಿಗೆ ಹೋದರೂ, ಅವರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತೇನೆ. ತುಂಬಾ ಶ್ರೇಷ್ಠ ವ್ಯಕ್ತಿತ್ವ.
ರಾಜ್ಕುಮಾರ್ ಅವರಂತಹ ವ್ಯಕ್ತಿಯಿಂದ ಆಶೀರ್ವಾದ ಪಡೆದದಕ್ಕಾಗಿ ನಾನು ಯಾವಾಗಲೂ ಕೃತಜ್ಞನಾಗಿದ್ದೇನೆ. ಆ ಬಾಧ್ಯತೆ ನನ್ನ ಮೇಲಿದೆ" ಎಂದರು.








