ನಾಲ್ಕು ದಿನಗಳ ಸಭೆಯ ನಂತರ ಪಾಕಿಸ್ತಾನ - ಅಫ್ಘಾನಿಸ್ತಾನ ಶಾಂತಿ ಮಾತುಕತೆ ವಿಫಲ

ನಾಲ್ಕು ದಿನಗಳ ಸಭೆಯ ನಂತರ ಪಾಕಿಸ್ತಾನ - ಅಫ್ಘಾನಿಸ್ತಾನ ಶಾಂತಿ ಮಾತುಕತೆ ವಿಫಲ
By Published : October 29, 2025 at 9:04 AM IST

ಅಂಕಾರಾ, ಟರ್ಕಿ:ಇಸ್ತಾಂಬುಲ್​ನಲ್ಲಿ ನಡೆದ ನಾಲ್ಕು ದಿನಗಳ ಸಂಧಾನ ಸಭೆ ಬಳಿಕ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಶಾಂತಿ ಮಾತುಕತೆ ವಿಫಲವಾಗಿದೆ. ಪಾಕಿಸ್ತಾನದ ಮಾಹಿತಿ ಸಚಿವರು ಬುಧವಾರ ಬೆಳಗಿನ ಜಾವದ ಮೊದಲು ಈ ವಿಷಯವನ್ನು ತಿಳಿಸಿದ್ದಾರೆ. ಕಾಬೂಲ್‌ನಲ್ಲಿರುವ ತಾಲಿಬಾನ್ ಸರ್ಕಾರವು ಮಾರಕ ಗಡಿಯಾಚೆಗಿನ ದಾಳಿಗಳಿಗೆ ಕಾರಣವಾದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ನಿರಾಕರಿಸಿದೆ ಎಂದು ಅವರು ಆರೋಪಿಸಿದ್ದಾರೆ. ಪಾಕ್ - ಆಫ್ಘನ್​ ಗಡಿಯಲ್ಲಿ ನಡೆದ ಮಾರಕ ಘರ್ಷಣೆ ಬಳಿಕ ದೋಹಾದಲ್ಲಿ ನಡೆದ ಮಾತುಕತೆ ಭಾಗವಾಗಿ ಅಕ್ಟೋಬರ್​ 19ರಂದು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿತ್ತು. ಅದಾದ ಬಳಿಕ ಇಸ್ತಾಂಬುಲ್​ನಲ್ಲಿ ಎರಡೂ ರಾಷ್ಟ್ರಗಳ ನಡುವೆ ಸಂಧಾನ ಸಭೆಗಳು ನಡೆದಿದ್ದವು, ಅದೀಗ ವಿಫಲವಾಗಿದೆ.

ದಾಳಿಗಳ ಹೆಚ್ಚಳಕ್ಕೆ ಸಂಬಂಧಿಸಿರುವ ಉಗ್ರರಿಗೆ ತಾಲಿಬಾನ್ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ, ಕಾಬೂಲ್ ತನ್ನ ಪ್ರದೇಶವನ್ನು ಪಾಕಿಸ್ತಾನದ ವಿರುದ್ಧ ಬಳಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ. ಬುಧವಾರ ಬೆಳಗಿನ ಜಾವದ ಮೊದಲು, ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್, X ಹ್ಯಾಂಡಲ್​ ನಲ್ಲಿ ಪೋಸ್ಟ್​ ಹಾಕಿದ್ದಾರೆ. ಕತಾರ್ ಮತ್ತು ಟರ್ಕಿಯ ಮಧ್ಯಸ್ಥಿಕೆಯ ಹೊರತಾಗಿಯೂ ಮಾತುಕತೆಯು ಯಾವುದೇ ಕಾರ್ಯಸಾಧ್ಯ ಪರಿಹಾರವನ್ನು ತರುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ. ತರಾರ್ ಅವರ ಈ ಹೇಳಿಕೆಗಳ ಬಗ್ಗೆ ಕಾಬೂಲ್‌ನಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮಾತುಕತೆಯಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂದು ಎರಡೂ ದೇಶಗಳ ಸರ್ಕಾರಿ ಮಾಧ್ಯಮಗಳು ಹೇಳಿದ ಕೆಲವೇ ಗಂಟೆಗಳ ನಂತರ ಇತ್ತೀಚಿನ ಬೆಳವಣಿಗೆ ನಡೆದಿದೆ. ಸಹೋದರ ರಾಷ್ಟ್ರಗಳಾದ ಕತಾರ್ ಮತ್ತು ಟರ್ಕಿಯ ಕೋರಿಕೆಯ ಮೇರೆಗೆ ಪಾಕಿಸ್ತಾನವು ಶಾಂತಿ ಸ್ಥಾಪನೆಗೆ ಅವಕಾಶ ನೀಡಿ, ಮೊದಲು ದೋಹಾದಲ್ಲಿ ಮತ್ತು ನಂತರ ಇಸ್ತಾಂಬುಲ್‌ನಲ್ಲಿ ಅಫಘಾನ್ ತಾಲಿಬಾನ್ ಸರ್ಕಾರದೊಂದಿಗೆ ಮಾತುಕತೆಗೆ ತೊಡಗಿಸಿಕೊಂಡಿದೆ ಎಂದು ತರಾರ್ ಹೇಳಿದ್ದಾರೆ. ಪಾಕಿಸ್ತಾನವು ಯಾವಾಗಲೂ ಅಫ್ಘಾನಿಸ್ತಾನದ ಜನರ ಶಾಂತಿ ಮತ್ತು ಸಮೃದ್ಧಿಯನ್ನು ಬಯಸಿದೆ. ಇದಕ್ಕಾಗಿ ಅಪಾರ ತ್ಯಾಗ ಮಾಡಿದೆ. ಆದರೆ ತಾಲಿಬಾನ್ ಪಾಕಿಸ್ತಾನದ ತ್ಯಾಗಗಳ ಬಗ್ಗೆ ಅಸಡ್ಡೆ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.

ಗಡಿಯಾಚೆಗಿನ ದಾಳಿಗಳು ಮತ್ತು ಉಗ್ರಗಾಮಿ ಸುರಕ್ಷಿತ ತಾಣಗಳ ಕುರಿತು ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವೆ ಹೆಚ್ಚಿದ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಈ ಸಂಧಾನ ಮಾತುಕತೆಗೆ ವೇದಿಕೆ ಸಿದ್ದಮಾಡಿದ್ದಕ್ಕಾಗಿ ಪಾಕಿಸ್ತಾನ ಕತಾರ್ ಮತ್ತು ಟರ್ಕಿಗೆ ಕೃತಜ್ಞತೆ ಸಲ್ಲಿಸುತ್ತದೆ ಎಂದು ತರಾರ್ ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಸಂಬಂಧಗಳು ಹದಗೆಟ್ಟಿವೆ. ಪಾಕಿಸ್ತಾನದ ತಾಳ್ಮೆ ಮುಗಿದಿದೆ - ತರಾರ್​:ತಾಲಿಬಾನ್ ಆಡಳಿತವು ಅಫ್ಘಾನಿಸ್ತಾನದ ಜನರ ಬಗ್ಗೆ ಯಾವುದೇ ಜವಾಬ್ದಾರಿ ಹೊಂದಿಲ್ಲ ಮತ್ತು ಯುದ್ಧ ಆರ್ಥಿಕತೆಯ ಮೇಲೆ ಅಭಿವೃದ್ಧಿ ಹೊಂದುತ್ತಿರುವುದರಿಂದ ಅದು ಅಫ್ಘಾನ್​ ಜನರನ್ನು ಅನಗತ್ಯ ಯುದ್ಧಕ್ಕೆ ಎಳೆದುಕೊಂಡು ಹೋಗಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ತಾಳ್ಮೆ ಮುಗಿದಿದೆ ಎಂದು ತರಾರ್ ಹೇಳಿದ್ದು, ಇಸ್ಲಾಮಾಬಾದ್ "ಭಯೋತ್ಪಾದನೆಯ ಬೆದರಿಕೆಯಿಂದ ನಮ್ಮ ಜನರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ" ಎಂದು ಆಫ್ಘನ್​​ಗೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಮೊದಲು, ಮಂಗಳವಾರ, ಮಾತುಕತೆಗಳ ಬಗ್ಗೆ ನೇರ ಜ್ಞಾನ ಹೊಂದಿದ್ದ ಮೂವರು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ಮಾತನಾಡಿ, ಪಾಕಿಸ್ತಾನದ ವಿರುದ್ಧ ಅಫಘಾನ್​ ನೆಲವನ್ನು ಬಳಸಬಾರದು ಎಂಬ ಪಾಕ್​ ಬೇಡಿಕೆಗಳ ಬಗ್ಗೆ ಯಾವುದೇ ಭರವಸೆ ನೀಡುವಲ್ಲಿ ಕಾಬೂಲ್ ಹಿಂಜರಿಯುವುದರಿಂದ ಇಸ್ತಾಂಬುಲ್​ ನಲ್ಲಿ ನಡೆದ ಮಾತುಕತೆಯಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಲು ಅವರಿಗೆ ಅಧಿಕಾರವಿಲ್ಲದ ಕಾರಣ ಅಧಿಕಾರಿಗಳು ಅನಾಮಧೇಯತೆಯ ಷರತ್ತಿನ ಮೇಲೆ ಈ ಮಾಹಿತಿ ನೀಡಿದ್ದಾರೆ. ಅಂತಿಮ ಸುತ್ತಿನ ಮಾತುಕತೆಗಳು ಸಾಧ್ಯವಾದಷ್ಟು ಬೇಗ ಪುನರಾರಂಭಗೊಳ್ಳುವಂತೆ ಆತಿಥೇಯ ದೇಶವು ಬಿಕ್ಕಟ್ಟನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಪಾಕಿಸ್ತಾನ ಅಧಿಕಾರಿಗಳ ಪ್ರಕಾರ, ತಾಲಿಬಾನ್ ನಿಯೋಗವು ಪಾಕಿಸ್ತಾನದ ಪ್ರಸ್ತಾಪಗಳನ್ನು ಸ್ವೀಕರಿಸಲು "ಸಂಪೂರ್ಣವಾಗಿ ಸಿದ್ಧರಿಲ್ಲ" ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಕಾಬೂಲ್‌ನಿಂದ ಮಾರ್ಗದರ್ಶನ ಪಡೆಯುವುದನ್ನು ಮುಂದುವರೆಸಿದೆ. ಅಫ್ಘಾನಿಸ್ತಾನ ನಿಯಂತ್ರಿತ ಮಾಧ್ಯಮ RTA ಪಾಕಿಸ್ತಾನದ ಕಡೆಯ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದೆ. ಟರ್ಕಿಯಲ್ಲಿ ಇತ್ತೀಚಿನ ಸುತ್ತಿನ ಮಾತುಕತೆಗಳು ನಡೆಯುತ್ತಿರುವಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಎರಡು ನೆರೆಹೊರೆಯವರ ನಡುವಿನ ಬಿಕ್ಕಟ್ಟನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ.

ಇದನ್ನು ಓದಿ:.

📚 Related News