ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡು ಬಂದ ಬಾಂಗ್ಲಾದೇಶಿ ಮಹಿಳೆ: ಬೆಂಗಳೂರು ಪೊಲೀಸರಿಂದ ರಕ್ಷಣೆ

ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡು ಬಂದ ಬಾಂಗ್ಲಾದೇಶಿ ಮಹಿಳೆ: ಬೆಂಗಳೂರು ಪೊಲೀಸರಿಂದ ರಕ್ಷಣೆ
By Published : September 9, 2025 at 5:57 PM IST

ಬೆಂಗಳೂರು: ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆಯಾಗಿ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಬಾಂಗ್ಲಾದೇಶದ 30 ವರ್ಷದ ಮಹಿಳೆಯೊಬ್ಬರು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.

ಸಂತ್ರಸ್ತೆ ಮಹಿಳೆಯು ತನ್ನನ್ನು ವೇಶ್ಯಾವಾಟಿಕೆ ದಂಧೆಯಿಂದ ರಕ್ಷಿಸಿ ಎಂದು ಸಹಾಯ ಕೋರಿ ಹುಳಿಮಾವು ಪೊಲೀಸ್ ಠಾಣೆಗೆ ಭಾನುವಾರ ಬಂದಿದ್ದರು. ಆಕೆ ಅರೆಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಕರ್ತವ್ಯದಲ್ಲಿದ್ದ ಪೊಲೀಸರು ಆಕೆಯನ್ನು ವಿಚಾರಿಸಿದಾಗ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ.

ಮೊದಲು ಬ್ಯೂಟಿಪಾರ್ಲರ್​ ಕೆಲಸ, ಬಳಿಕ ವೇಶ್ಯಾವಾಟಿಕೆ: ಸಂತ್ರಸ್ತೆಯು ನೀಡಿದ ಮಾಹಿತಿಯಂತೆ, ತನಗೆ ಉತ್ತಮ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಭಾರತಕ್ಕೆ ಕರೆತಂದರು. ನನ್ನೊಂದಿಗೆ ಮತ್ತಷ್ಟು ಮಹಿಳೆಯರೂ ಇದ್ದರು. ಬಳಿಕ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆಗೆ ತಳ್ಳಿದರು. ಆರಂಭದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ತಿಂಗಳಿಗೆ 15 ಸಾವಿರದಿಂದ 20 ಸಾವಿರ ರೂಪಾಯಿ ಸಂಬಳದ ಸಿಬ್ಬಂದಿಯಾಗಿ ಕೆಲಸ ನೀಡಲಾಯಿತು. ಆದರೆ, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಒಂದು ಮನೆಯಲ್ಲಿ ಇರಿಸಿದಾಗ ತನ್ನನ್ನು ವೇಶ್ಯಾವಾಟಿಕೆಗೆ ತಳ್ಳಿರುವುದು ತಿಳಿದು ಬಂದಿತು ಎಂದು ಹೇಳಿಕೊಂಡಿದ್ದಾಳೆ.

ಆರೋಪಿಗಳು ತನಗೆ ಮಾನಸಿಕವಾಗಿ ಹಿಂಸಿಸಿದರು. ತನ್ನನ್ನು ಇಬ್ಬರು ಪುರುಷರೊಂದಿಗೆ ಕಾರಿನಲ್ಲಿ ಕಳುಹಿಸಿದರು. ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ನಿರ್ಜನ ಸ್ಥಳಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿದರು. ಅವರು ಸೇವಿಸುತ್ತಿದ್ದಾಗ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದೆ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ಗಡೀಪಾರಿಗೆ ಚರ್ಚೆ: ಪುರುಷರಿಂದ ತಪ್ಪಿಸಿಕೊಂಡು ಬಂದ ಆಕೆ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಕಂಡ ಪೊಲೀಸ್ ಅಧಿಕಾರಿಯ ಬಳಿಗೆ ತೆರಳಿ ಸಹಾಯಕ್ಕಾಗಿ ಕೋರಿದ್ದಾಳೆ. ತನಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ತನ್ನನ್ನು ಮನೆಗೆ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ನಂತರ ಪೊಲೀಸರು ಆಕೆಯನ್ನು ನಗರದ ಎನ್‌ಜಿಒಗೆ ಹಸ್ತಾಂತರಿಸಿದ್ದಾರೆ. ಗಡೀಪಾರು ಪ್ರಕ್ರಿಯೆಗಾಗಿ ಚರ್ಚಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ಅಂದರೆ, ಈ ವರ್ಷದ ಆರಂಭದಲ್ಲಿ ಬೆಂಗಳೂರು ಪೊಲೀಸರು ಇದೇ ರೀತಿಯ ದಂಧೆಯನ್ನು ಭೇದಿಸಿ, ನಗರದಲ್ಲಿ ವೇಶ್ಯಾವಾಟಿಕೆಗೆ ಬಳಸಲ್ಪಟ್ಟಿದ್ದ ಬಾಂಗ್ಲಾದೇಶ ಮತ್ತು ನೇಪಾಳ ಮೂಲದವರು ಸೇರಿ 10 ಮಹಿಳೆಯರನ್ನು ರಕ್ಷಿಸಿದ್ದರು. 2024ರ ಅಕ್ಟೋಬರ್‌ನಲ್ಲಿಯೂ ಸಿಸಿಬಿ ವೇಶ್ಯಾವಾಟಿಕೆ ದಂಧೆ ಭೇದಿಸಿ, ಬೆಂಗಳೂರಿನಲ್ಲಿ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಜಾಲದಿಂದ 12 ಹುಡುಗಿಯರನ್ನು ರಕ್ಷಿಸಿತ್ತು. ರಕ್ಷಿಸಲ್ಪಟ್ಟ ಹುಡುಗಿಯರಲ್ಲಿ ನಗರಕ್ಕೆ ಕಳ್ಳಸಾಗಣೆ ಮಾಡಲಾಗಿದ್ದ ಮೂವರು ಬಾಂಗ್ಲಾದೇಶಿ ಪ್ರಜೆಗಳು ಸೇರಿದ್ದರು. ಕಳ್ಳಸಾಗಣೆ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪೊಲೀಸರು 26 ಆರೋಪಿಗಳನ್ನು ಬಂಧಿಸಿದ್ದಾರೆ.

📚 Related News