ಬೆಂಗಳೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದಲ್ಲಿನ ಹೊನ್ನೇಶ್ವರ ದೇವಾಲಯದ ಸುತ್ತಲು ಪ್ರಾಣಿಗಳ ವಧೆ ಮತ್ತು ಮಾಂಸಾಹಾರ ಸೇವನೆ ನಿಷೇಧಿಸಿ ಹೊರಡಿಸಿರುವ ನೋಟಿಸ್ ಹಿಂಪಡೆಯಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಅಲ್ಲದೇ, ದೇವಾಲಯದ ಸುತ್ತಮುತ್ತಲ ಭಾಗಗಳಲ್ಲಿ ಪ್ರಾಣಿವಧೆ ಮಾತ್ರ ಸೀಮಿತಗೊಳಿಸಿ ಮುಂದಿನ ಒಂದು ವಾರದಲ್ಲಿ ಹೊಸದಾಗಿ ನೋಟಿಸ್ ನೀಡಲಾಗುವುದು ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ದೇವಾಲಯದ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ಮತ್ತು ಪ್ರಾಣಿ ಬಲಿ ನಡೆಸುವಂತಿಲ್ಲ ಎಂಬ ಷರತ್ತು ವಿಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು 2014ರ ಜುಲೈ 13ರಂದು ಸ್ಥಳೀಯ ಪೊಲೀಸರ ಹೊರಡಿಸಿದ್ದ ನೋಟಿಸ್ ಪ್ರಶ್ನಿಸಿ ಹೊನ್ನೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.
ಅಲ್ಲದೇ, ದೇವಾಲಯದ ಆವರಣದಲ್ಲಿ ಪ್ರಾಣಿಬಲಿಗೆ ಸಂಬಂಧಿಸಿದಂತೆ ಮಾತ್ರ ನಿರ್ಬಂಧ ವಿಧಿಸಲಾಗಿದೆ. ಆದರೆ, ಮಾಂಸಾಹಾರ ಸೇವೆನೆ ಸಂಬಂಧ ಯಾವುದೇ ನಿರ್ಬಂಧವಿಲ್ಲ ಎಂಬುದಾಗಿ ಸೂಚಿಸಿ ಹೊಸದಾಗಿ ನೋಟಿಸ್ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಣೆ ನೀಡಿದರು.
ನೋಟಿಸ್ ವಿರೋಧಿಸಿದ್ದ ಜನರು: ಈ ಹಿಂದೆ ನಡೆದಿದ್ದ ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಹೊನ್ನೇಶ್ವರಸ್ವಾಮಿ ದೇವಾಲಯ ಮುಜರಾಯಿ ದೇವಸ್ಥಾನ ಅಲ್ಲ. ಇದೊಂದು ಖಾಸಗಿ ದೇವಾಲಯ. ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಿರ್ವಹಣೆ ಮಾಡುತ್ತಿದ್ದಾರೆ. ದೇವಸ್ಥಾನದ ಬಳಿ ಯಾವುದೇ ಪ್ರಾಣಿಗಳ ಬಲಿ ಅಥವಾ ವಧೆ ಮಾಡುವುದಿಲ್ಲ. ಹೊರಗಿನಿಂದ ತಂದ ಮಾಂಸವನ್ನು ಅಡುಗೆ ಮಾಡಿ ದೇವಸ್ಥಾನದ ಬಳಿ ಇರುವ ಸಮುದಾಯ ಭವನ ಹಾಗೂ ಉಪಾಹಾರ ಗೃಹದಲ್ಲಿ ಸೇವನೆ ಮಾಡುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಆದರೆ, ಇದೀಗ ಪೊಲೀಸರು ನೋಟಿಸ್ ಕೊಟ್ಟು ಮಾಂಸಾಹಾರ ಸೇವನೆ ನಿಷೇಧಿಸಿದ್ದಾರೆ. ಇದು ಆಹಾರದ ಹಕ್ಕು ಹಾಗೂ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣಾ ಪದ್ದತಿಗೆ ವಿರುದ್ಧವಾಗಿದೆ ಎಂದು ವಾದಿಸಿದ್ದರು.
ವಾದ ಆಲಿಸಿದ ನ್ಯಾಯಪೀಠವು, ನೋಟಿಸ್ ಕೊಡುವ ಮೊದಲು ಸ್ಥಳೀಯ ಆಚಾರ ಸಂಪ್ರದಾಯಗಳನ್ನು ಪರಿಶೀಲಿಸಲಾಗಿದೆಯೇ? ದೇವಸ್ಥಾನದ ಬಳಿ ಮಾಂಸಾಹಾರ ಸೇವನೆ ಯಾವ ಕಾರಣಕ್ಕಾಗಿ ನಿಷೇಧಿಸಲಾಗಿದೆ ಎಂಬ ಬಗ್ಗೆ ಪೊಲೀಸರ ಮೂಲಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೇ, ಅರ್ಜಿ ಸಂಬಂಧ ರಾಜ್ಯ ಗೃಹ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಮಧುಗಿರಿ ತಹಶೀಲ್ದಾರ್, ಬಡವನಹಳ್ಳಿ ಪೊಲೀಸ್ ವೃತ್ತ ನಿರೀಕ್ಷರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಪ್ರಕರಣದ ವಿವರ: ಶಿವನಗೆರೆ ಗ್ರಾಮದಲ್ಲಿರುವ ಹೊನ್ನೇಶ್ವರಸ್ವಾಮಿ ದೇವಸ್ಥಾನ 500 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಅಲ್ಲಿಂದ ಇಲ್ಲಿವರೆಗೆ ಯಾವುದೇ ಗೊಂದಲಗಳಿಲ್ಲದೇ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ.
ಬಹಳ ಹಿಂದಿನಿಂದಲೂ ಮಾಂಸಾಹಾರ ಸೇವನೆ ಪದ್ದತಿ ರೂಢಿಯಲ್ಲಿದೆ. 2024ರ ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ಆದೇಶ ಉಲ್ಲೇಖಿಸಿ ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ಹಾಗೂ ಮಾಂಸಾಹಾರ ಸೇವನೆ ನಿಷೇಧಿಸಿ 2024ರ ಜುಲೈ 13ರಂದು ಬಡವನಹಳ್ಳಿ ಪೊಲೀಸರು ಸೂಚನೆ ನೀಡಿದ್ದರು. ಇದನ್ನು ಉಲ್ಲಂಘಿಸಿದವರಿಗ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ದೇವಸ್ಥಾನದ ಬಳಿ ಅಷ್ಟೇ ಅಲ್ಲ, ಇಡೀ ಗ್ರಾಮದಲ್ಲಿ ಮಾಂಸಾಹಾರ ಸೇವನೆ ನಿಷೇಧವಾದಂತಾಗಿದೆ. ಇದು ಗ್ರಾಮಸ್ಥರ ಆಹಾರದ ಹಕ್ಕು ಉಲ್ಲಂಘನೆಯಾದಂತಾಗಿದೆ. ಭಕ್ತರ ಹಲವು ವರ್ಷಗಳ ಆಚರಣಾ ಪದ್ದತಿಗೆ ವಿರುದ್ಧವಾಗಿದೆ. ಆದ್ದರಿಂದ ಪೊಲೀಸರ ನೋಟಿಸ್ ರದ್ದು ಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.