ಕನ್ನಡ ಚಿತ್ರರಂಗದಲ್ಲಿ ಮೂಡಿ ಬರುತ್ತಿರುವ ಕಂಟೆಂಟ್ ಚಿತ್ರಗಳು ಸಿನಿಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಇದೀಗ ಹ್ಯಾಪಿ ಬರ್ತ್ ಡೇ ಚಿತ್ರ ಖ್ಯಾತಿಯ ಸಚಿನ್ ಚಲುವರಾಯಸ್ವಾಮಿ ಅವರು ಕಂಟೆಂಟ್ ಸಿನಿಮಾದೊಂದಿಗೆ ಪ್ರೇಕ್ಷಕರೆದುರು ಬರಲು ರೆಡಿಯಾಗಿದ್ದಾರೆ. ಈಗಾಗಲೇ ವಿಭಿನ್ನ ಪೋಸ್ಟರ್ ಹಾಗೂ ಟೀಸರ್ನಿಂದ ವೀಕ್ಷಕರ ಗಮನ ಸೆಳೆದಿದ್ದ 'ಕಮಲ್ ಶ್ರೀದೇವಿ' ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ.
ಈ ಸಾಲಿನಲ್ಲಿ ಕಮಲ್ ಹಾಸನ್ ಅವರ ಕನ್ನಡ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದು ನಿಮಗೆ ತಿಳಿದೇ ಇದೆ. ಆ ಸಂದರ್ಭ 'ಕಮಲ್ ಶ್ರೀದೇವಿ' ಚಿತ್ರ ಈ ವಿಷಯಕ್ಕೆ ಸಂಬಂಧಿಸಿದ್ದೇ? ಎಂದು ಪ್ರೇಕ್ಷಕರು ಊಹಿಸಿದ್ದರು. ಜೂನ್ ನಡುವೆ, ಕಮಲ್ ಶ್ರೀದೇವಿ ಚಿತ್ರಕ್ಕೂ, ಕಮಲ್ ಹೆಸರಿಗೂ ಹಾಗೂ ಇತ್ತೀಚಿನ ವಿವಾದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿತ್ತು. ಸದ್ಯ ಟ್ರೇಲರ್ ಬಿಡುಗಡೆ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.
ಈ ಚಿತ್ರದಲ್ಲಿ ಸಚಿನ್ ಚಲುವರಾಯ ಸ್ವಾಮಿ ಜೊತೆಗೆ ಸಂಗೀತಾ ಭಟ್ ಒಂದು ಚಾಲೆಂಜಿಂಗ್ ಪಾತ್ರ ನಿರ್ವಹಿಸಿದ್ದಾರೆ. ಇವರ ಜೊತೆ ನಟ ಕಿಶೋರ್, ರಮೇಶ್ ಇಂದಿರಾ, ಮಿತ್ರ ಸೇರಿ ಪ್ರತಿಭಾವಂತರ ತಾರಾಬಳಗವಿದೆ. ವಿ.ಎ.ಸುನೀಲ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನು ಸಹ ನಿರ್ಮಾಪಕ ರಾಜವರ್ಧನ್ ಹೊತ್ತುಕೊಂಡಿದ್ದಾರೆ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಸಹ ನಿರ್ಮಾಪಕ ರಾಜವರ್ಧನ್, ನಟಿ ಸಂಗೀತಾ ಭಟ್ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿದರು. ಎಲ್ಲಾ ಪ್ರಶಸ್ತಿಗಳು ಇವರಿಗೇ ಸಲ್ಲಬೇಕೆಂದು ಹಾರೈಸಿದರು. 'ಸಂಗೀತಾ ಭಟ್ ಅಭಿನಯಕ್ಕೆ ಒಂದು ಸಲಾಂ. ಎಲ್ಲಾ ಪ್ರಶಸ್ತಿಗಳಿಗೂ ಇವರು ಅರ್ಹ' ಎಂದು ತಿಳಿಸಿದರು.
ನಂತರ ನಟ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ಇದು ಗೆಲ್ಲೋ ನಿಲ್ಲೋ ಕಂಟೆಂಟ್ ಸಿನಿಮಾ. ಕಾಡುವ ಪಾತ್ರಗಳು, ಕ್ವಾಲಿಟಿ ಇಲ್ಲಿನ ಹೈಲೈಟ್. ಚಿತ್ರ ಎಲ್ಲರನ್ನೂ ಕಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟಿ ಸಂಗೀತಾ ಭಟ್ ಮಾತನಾಡಿ, ಕಮಲ್ ಶ್ರೀದೇವಿ ಚಿತ್ರದಲ್ಲಿ ನನ್ನ ಪಾತ್ರ ನನ್ನ ವೃತ್ತಿ ಬದುಕಿಗೆ ಹೊಸ ತಿರುವು ಕೊಡುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.


ಎನ್.ಚಲುವರಾಯ ಸ್ವಾಮಿ ಅರ್ಪಿಸುತ್ತಿರೋ ಈ ಕಮಲ್ ಶ್ರೀದೇವಿ ಚಿತ್ರವನ್ನು ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ.ಧನಲಕ್ಷ್ಮೀ ನಿರ್ಮಿಸಿದ್ದಾರೆ. ನಟ ರಾಜವರ್ಧನ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಟ್ರೇಲರ್ನಿಂದಲೇ ಕುತೂಹಲ ಹುಟ್ಟಿಸಿರೋ ಕಮಲ್ ಶ್ರೀದೇವಿ ಸೆಪ್ಟೆಂಬರ್ 19ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.