ಧಾರವಾಡ: ಆರೋಗ್ಯದಲ್ಲಿ ಏರುಪೇರಾಗಿ 19 ಜನರು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಜನರು ಜ್ವರದಿಂದ ಬಳಲಿದ್ದು, ಬಳಿಕ ವಾಂತಿ, ಭೇದಿ, ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು.
ಈ ಬಾರಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಬೇರೆ ಬೇರೆ ಕಡೆಗಳಿಂದ ನೀರು ಕೆರೆಗೆ ಹರಿದುಬಂದಿದೆ. ಕೆರೆ ನೀರು ಕಲುಷಿತಗೊಂಡ ಕಾರಣದಿಂದ ಜನರಿಗೆ ಜ್ವರ ಬಂದಿದ್ದು, ವಾಂತಿ, ಭೇದಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ಇದರಿಂದ ಅಲ್ಲಿನ ಜನರು ಕಂಗಾಲಾಗಿದ್ದಾರೆ. ಕೆಲವರು ಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳಲ್ಲಿ ಮಾತ್ರ ತೆಗೆದುಕೊಂಡರೆ, ಕೆಲವರು ಅತಿಯಾಗಿ ಭೇದಿಮತ್ತು ಹೊಟ್ಟೆ ನೋವಿನಿಂದ ಬಳಲಿ ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಹಶಿಲ್ದಾರ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಎಲ್ಲರೂ ಆರೋಗ್ಯವಾಗಿದ್ದಾರೆ- ಜಿಲ್ಲಾ ಆರೋಗ್ಯಾಧಿಕಾರಿ: ತಾಲೂಕಾಸ್ಪತ್ರೆಗೆ ಭೇಟಿ ನೀಡಿ, ಜನರ ಆರೋಗ್ಯ ವಿಚಾರಿಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ, ''ವಿಷಯ ತಿಳಿಯುತ್ತಿದ್ದಂತೆ ನಾನು ಆಸ್ಪತ್ರೆಗೆ ಬಂದಿದ್ದೇನೆ. ಒಟ್ಟು 19 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ಪುರುಷರು, 8 ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಗೆ ಕಳೆದ ಎರಡು ದಿನಗಳಿಂದ ಜ್ವರ ಇತ್ತು. ಇದೀಗ ವಾಂತಿ, ಭೇದಿ ಕಾಣಿಸಿಕೊಂಡಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾವುದೇ ತೊಂದರೆ ಇಲ್ಲ. ಆಸ್ಪತ್ರೆಗೆ ಮತ್ತೆ ಯಾರಾದರೂ ಬಂದರೆ, ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ, ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ'' ಎಂದು ತಿಳಿಸಿದರು.

ಗುಡಿಸಾಗರ ಗ್ರಾಮಕ್ಕೆ ಭೇಟಿ: ''ಆಸ್ಪತ್ರೆಯಲ್ಲಿ ಯಾವುದೇ ಔಷಧಿಗಳ ಕೊರತೆಯಿಲ್ಲ. ಬೇಕಾದ ಎಲ್ಲ ಸೌಲಭ್ಯಗಳೂ ಇವೆ. ವೈಯಕ್ತಿಕವಾಗಿ ಜನರ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸುವಂತೆ ನಾನು ಸೂಚನೆ ನೀಡಿದ್ದೇನೆ. ಅಲ್ಲದೆ, ನಾನು ಗುಡಿಸಾಗರ ಗ್ರಾಮಕ್ಕೆ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿನ ವ್ಯವಸ್ಥೆಗಳ ಕುರಿತಂತೆ ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಅಲ್ಲಿ ಜನರಿಗೆ ಆರೋಗ್ಯ ತೊಂದರೆ ಇದ್ದರೆ, ಅಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುವುದು'' ಎಂದು ಹೇಳಿದರು.
ಅಗತ್ಯಬಿದ್ದರೆ ಕೆಎಂಸಿಗೆ ಕಳುಹಿಸಲು ವ್ಯವಸ್ಥೆ: ''ಸದ್ಯ ಇಲ್ಲಿ ದಾಖಲಾದ ಯಾರನ್ನೂ ಕೂಡ ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿಗೆ ರವಾನಿಸಬೇಕಾದ ಅಗತ್ಯವಿಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ. ಮುಂದೆ ಹಾಗೇನಾದರೂ ಅಗತ್ಯಬಿದ್ದರೆ, ಅವರನ್ನು ಕೆಎಂಸಿಗೆ ಕಳುಹಿಸಲು ವ್ಯವಸ್ಥೆ ಮಾಡಲಾವುದು'' ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಮಾಹಿತಿ ನೀಡಿದರು.