ನವದೆಹಲಿ:ವೈದ್ಯರ ಬಗ್ಗೆ ಕಾಳಜಿ ವಹಿಸದೇ ಇದ್ದರೆ ಮತ್ತು ಅವರ ಪರವಾಗಿ ನಾವು ನಿಲ್ಲದೇ ಇದ್ದರೆ ನ್ಯಾಯಾಂಗವನ್ನು ಸಮಾಜ ಕ್ಷಮಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಇದೇ ವೇಳೆ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಖಾಸಗಿ ವೈದ್ಯರು ಲಾಭಕ್ಕಾಗಿ ಕೆಲಸ ಮಾಡಿದ್ದಾರೆ ಎಂಬ ವಾದವನ್ನು ಕೋರ್ಟ್ ಖಂಡಿಸಿತು. ಖಾಸಗಿ ಆಸ್ಪತ್ರೆಗಳು ಮತ್ತು ಮಾನ್ಯತೆ ಪಡೆಯದ ಆಸ್ಪತ್ರೆಗಳಲ್ಲಿ ಕೋವಿಡ್ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ವಿಮಾ ಪಾಲಿಸಿಗಳಲ್ಲಿ ಸೇರಿಸದಿರುವ ವಿರುದ್ಧದ ಅರ್ಜಿಯ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ. ಎಸ್. ನರಸಿಂಹ ಮತ್ತು ಆರ್.
ಮಹಾದೇವನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಮಾ ಕಂಪನಿಗಳು ಅರ್ಹ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಅವರು ಕೋವಿಡ್ ವೇಳೆ ಕಾರ್ಯ ನಿರ್ವಹಿಸಿದ್ದಾರೆ ಮತ್ತು ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ ಎಂಬ ಷರತ್ತು ಪೂರೈಸಿದರೆ ವಿಮಾ ಕಂಪನಿ ಕ್ಲೈಮ್ ಪಾವತಿಸುವಂತೆ ನೀವು ನಿರ್ದೇಶನ ನೀಡಬೇಕು ಎಂದು ಕೋರ್ಟ್ ಮೌಖಿಕ ಆದೇಶದಲ್ಲಿ ಸೂಚನೆ ನೀಡಿದೆ. ಇದೇ ವೇಳೆ, ಖಾಸಗಿ ವೈದ್ಯರು ಲಾಭಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಊಹೆಯೂ ಸರಿಯಲ್ಲ. ವೈದ್ಯರು ಸರ್ಕಾರಿ ಕರ್ತವ್ಯದಲ್ಲಿಲ್ಲ ಮತ್ತು ಅವರು ಲಾಭ ಗಳಿಸುತ್ತಿದ್ದಾರೆ ಎಂದು ಭಾವಿಸುವುದು ಕೂಡಾ ಸರಿಯಲ್ಲ ಎಂದು ಪೀಠ ಹೇಳಿದೆ.
ಪ್ರಧಾನ ಮಂತ್ರಿ ವಿಮಾ ಯೋಜನೆಯ ಹೊರತಾಗಿ ಲಭ್ಯವಿರುವ ಇತರ ರೀತಿಯ ಅಥವಾ ಸಮಾನಾಂತರ ಯೋಜನೆಗಳಿಗೆ ಸಂಬಂಧಿಸಿದ ದತ್ತಾಂಶಗಳು ಮತ್ತು ಮಾಹಿತಿ ದಾಖಲಿಸುವಂತೆ ಪೀಠ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ನಾವು ಇದಕ್ಕೆ ನಿಯಮಗಳನ್ನು ರೂಪಿಸುತ್ತೇವೆ. ಅದರ ಆಧಾರದ ಮೇಲೆ ವಿಮಾ ಕಂಪನಿಗೆ ಹಕ್ಕು ಸಲ್ಲಿಸಬಹುದು. ನಮ್ಮ ತೀರ್ಪಿನ ಆಧಾರದ ಮೇಲೆ ವಿಮಾ ಕಂಪನಿ ಪರಿಗಣಿಸಿ ಆದೇಶಗಳನ್ನು ಹೊರಡಿಸಬಹುದು ಎಂದು ಪೀಠ ಹೇಳಿದೆ. 2021ರ ಮಾರ್ಚ್ 9ರಂದು ಬಾಂಬೆ ಹೈಕೋರ್ಟ್‌ನ ಆದೇಶದ ವಿರುದ್ಧ ಪ್ರದೀಪ್ ಅರೋರಾ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿದೆ.
ರಾಜ್ಯ ಅಥವಾ ಕೇಂದ್ರ ಸರ್ಕಾರ ಅವರ ಸೇವೆಗಳನ್ನು ಕೋರಿರದ ಹೊರತು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವಿಮಾ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಪ್ರಕರಣದ ಹಿನ್ನೆಲೆ ಹೀಗಿದೆ: 2020ರಲ್ಲಿ ಥಾಣೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ತಮ್ಮ ಪತಿಯನ್ನು ಕೋವಿಡ್ ರೋಗದಿಂದ ಕಳೆದುಕೊಂಡಿದ್ದ ಕಿರಣ್ ಭಾಸ್ಕರ್ ಸುರ್ಗಡೆ ಎಂಬವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ಈ ಆದೇಶ ಹೊರಡಿಸಿತ್ತು. ಪತಿಯ ಕ್ಲಿನಿಕ್ ಅನ್ನು ಕೋವಿಡ್ ಆಸ್ಪತ್ರೆ ಎಂದು ಗುರುತಿಸಲಾಗಿಲ್ಲ ಎಂಬ ಕಾರಣಕ್ಕೆ ವಿಮಾ ಕಂಪನಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (PMGKP) ಅಡಿಯಲ್ಲಿ ಅವರ ಹಕ್ಕನ್ನು ತಿರಸ್ಕರಿಸಿತ್ತು. PMGKP ಅನ್ನು ಮಾರ್ಚ್ 2020ರಲ್ಲಿ ಘೋಷಿಸಲಾಗಿದೆ. ಅಂದಿನಿಂದ ಅದರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.
PMKGP ಯೋಜನೆಯಡಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿಗಳ ವಿಮಾ ರಕ್ಷಣೆ ಒದಗಿಸಲಾಗಿದೆ. ಇದು ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡ ಕೋವಿಡ್ ಯೋಧರ ಅವಲಂಬಿತರಿಗೆ ಇರುವ ಸುರಕ್ಷತಾ ಸೌಲಭ್ಯವಾಗಿದೆ.








