ಅಫ್ಘಾನಿಸ್ತಾನ​ ವಿರುದ್ಧ ಇನ್ನಿಂಗ್ಸ್​ ಸಮೇತ ಟೆಸ್ಟ್​ ಪಂದ್ಯ ಗೆದ್ದ ಜಿಂಬಾಬ್ವೆ

ಅಫ್ಘಾನಿಸ್ತಾನ​ ವಿರುದ್ಧ ಇನ್ನಿಂಗ್ಸ್​ ಸಮೇತ ಟೆಸ್ಟ್​ ಪಂದ್ಯ ಗೆದ್ದ ಜಿಂಬಾಬ್ವೆ
By Published : October 23, 2025 at 3:27 PM IST | Updated : October 23, 2025 at 4:01 PM IST

AFG vs ZIM, Test:ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಜಿಂಬಾಬ್ವೆ ಇನ್ನಿಂಗ್ಸ್ ಮತ್ತು 73 ರನ್‌ಗಳಿಂದ ಗೆದ್ದಿದೆ. 12 ವರ್ಷಗಳ ನಂತರ ಜಿಂಬಾಬ್ವೆ ತವರಿನಲ್ಲಿ ಇದೇ ಮೊದಲ ಬಾರಿಗೆ 'ಟೆಸ್ಟ್' ಪಾಸಾಗಿದೆ. 2001ರ ನಂತರ, 24 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಇನ್ನಿಂಗ್ಸ್​ ಸಮೇತ ಜಿಂಬಾಬ್ವೆ ಗೆಲುವಿನ ರುಚಿ ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 127 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ರಹ್ಮಾನುಲ್ಲಾ ಗುರ್ಬಾಜ್ 37 ರನ್‌ಗಳೊಂದಿಗೆ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಅಬ್ದುಲ್​ ಮಲಿಕ್​ 30 ರನ್​ ಗಳಿಸಿದರು.

ಉಳಿದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಜಿಂಬಾಬ್ವೆಯ ಬ್ರಾಡ್​ ಇವನ್ಸ್​ 5​ ಮತ್ತು ಮಝರಬಾನಿ 3 ವಿಕೆಟ್ ಉರುಳಿಸಿದರು. ನಂತರ ಬ್ಯಾಟಿಂಗ್​ ಮಾಡಿದ ಜಿಂಬಾಬ್ವೆ 359 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಬೆನ್ ಕರನ್ 121 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಸಿಕಂದರ್ ರಾಜಾ 65 ರನ್‌ಗಳ ಕೊಡುಗೆ ನೀಡಿದರು.

ಇನ್ನುಳಿದಂತೆ, ನಿಕ್ ವಲೆಚ್ 49 ಮತ್ತು ಬ್ರಾಡ್ ಇವಾನ್ಸ್ 35 ರನ್ ಪೇರಿಸಿದರು. ಅಫ್ಘಾನಿಸ್ತಾನ ಪರ ಜಿಯಾವುರ್ ರೆಹಮಾನ್ 7 ವಿಕೆಟ್ ಪಡೆದರು. ಇದರೊಂದಿಗೆ ಜಿಂಬಾಬ್ವೆ 232 ರನ್​ಗಳ ಮುನ್ನಡೆ ಪಡೆದುಕೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ ಕೇವಲ 159 ರನ್‌ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಇಬ್ರಾಹಿಂ ಜದ್ರಾನ್ 42 ರನ್ ಗಳಿಸುವ ಮೂಲಕ ಅಗ್ರ ಸ್ಕೋರರ್ ಎನಿಸಿಕೊಂಡರೆ, ಬಹೀರ್ ಶಾ 32 ರನ್ ಗಳಿಸಿದರು.

ವಿಕೆಟ್ ಕೀಪರ್ ಬ್ಯಾಟರ್ ಆಸಿಫ್ ಜಜಾಯ್ 18 ರನ್ ಕೊಡುಗೆ ನೀಡಿದರು. 6 ಬ್ಯಾಟರ್‌ಗಳು ಎರಡಂಕಿ ಸ್ಕೋರ್​ ಗಳಿಸಲೂ ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆಯ ಸ್ಟಾರ್ ಬೌಲರ್ ರಿಚರ್ಡ್ 13 ಓವರ್‌ಗಳಲ್ಲಿ 37 ರನ್‌ಗಳಿಗೆ 5 ವಿಕೆಟ್‌ ಪಡೆದರು. ಬ್ಲೆಸ್ಸಿಂಗ್ ಮುಜರಬಾನಿ 3 ಮತ್ತು ತನಕಾ ಚಿವಂಗಾ 2 ವಿಕೆಟ್‌ ಪಡೆದರು. ಇದರೊಂದಿಗೆ ಜಿಂಬಾಬ್ವೆ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 73 ರನ್‌ಗಳಿಂದ ಗೆದ್ದು ಕೇಕೆ ಹಾಕಿತು.

ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಜಿಂಬಾಬ್ವೆಯ ಅತಿದೊಡ್ಡ ಗೆಲುವಾಗಿದೆ. ಈ ಹಿಂದೆ ಎರಡು ಬಾರಿ ಟೆಸ್ಟ್ ಪಂದ್ಯಗಳನ್ನು ಇನ್ನಿಂಗ್ಸ್‌ ಸಮೇತ ಗೆದ್ದಿತ್ತು. 1995ರಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು ಇನ್ನಿಂಗ್ಸ್ ಮತ್ತು 64 ರನ್‌ಗಳಿಂದ ಮಣಿಸಿತ್ತು. 2001ರಲ್ಲಿ ಜಿಂಬಾಬ್ವೆ ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಸೋಲಿಸಿತ್ತು. ಐತಿಹಾಸಿಕ ಗೆಲುವಿನೊಂದಿಗೆ ಜಿಂಬಾಬ್ವೆ ಇದೀಗ ಅಕ್ಟೋಬರ್ 29ರಿಂದ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ತಯಾರಿ ನಡೆಸುತ್ತಿದೆ.

ZIM vs AFG ಟೆಸ್ಟ್ ಪಂದ್ಯದ ಸಂಕ್ಷಿಪ್ತ ಸ್ಕೋರ್ ವಿವರ:ಅಫ್ಘಾನಿಸ್ತಾನಮೊದಲ ಇನಿಂಗ್ಸ್:32. 3 ಓವರ್‌ಗಳಲ್ಲಿ 127ಕ್ಕೆ ಆಲ್ಔಟ್. ರಹಮಾನಲ್ಲಾ ಗುರ್ಬಾಜ್ (37), ಅಬ್ದುಲ್ ಮಲಿಕ್ (30), ಬ್ರಾಡ್ ಇವಾನ್ಸ್ (5/22), ಬ್ಲೆಸ್ಸಿಂಗ್ ಮುಜರಬಾನಿ (3/47)ಜಿಂಬಾಬ್ವೆ ಮೊದಲ ಇನಿಂಗ್ಸ್:103 ಓವರ್‌ಗಳಲ್ಲಿ 359ಕ್ಕೆ ಆಲೌಟ್. ಬೆನ್ ಕುರ್ರಾನ್ (121), ಸಿಕಂದರ್ ರಜಾ (65), ಜಿಯಾವುರ್ ರೆಹಮಾನ್ (7/97), ಇಸ್ಮತ್ ಆಲಂ (2/51)ಅಫ್ಘಾನಿಸ್ತಾನ 2ನೇ ಇನಿಂಗ್ಸ್:43 ಓವರ್‌ಗಳಲ್ಲಿ 159ಕ್ಕೆ ಆಲೌಟ್. ಇಬ್ರಾಹಿಂ ಜದ್ರಾನ್ (42), ಬಹಿರ್ ಶಾ (32), ರಿಚರ್ಡ್ ನಾಗರವ (5/37), ಮುಜರಬಾನಿ (3/48)ಫಲಿತಾಂಶ:ಜಿಂಬಾಬ್ವೆ ತಂಡಕ್ಕೆ ಇನ್ನಿಂಗ್ಸ್ ಮತ್ತು 73 ರನ್‌ಗಳ ಗೆಲುವುಪಂದ್ಯಶ್ರೇಷ್ಠ: ಬೆನ್ ಕರನ್ (ಜಿಂಬಾಬ್ವೆ) 121 ರನ್‌.

📚 Related News