Ind vs Aus 2nd ODI:ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂದು ಟೀಮ್ ಇಂಡಿಯಾ ಸೋಲು ಕಂಡಿತು. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 265 ರನ್ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ, ಮ್ಯಾಥ್ಯು ಶಾರ್ಟ್ (74) ಮತ್ತು ಕೂಪರ್ ಕಾನೋಲಿ (61*) ಅವರ ಬ್ಯಾಟಿಂಗ್ ಬಲದಿಂದ 2 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. 2-0ಯಿಂದ ಸರಣಿ ಗೆದ್ದ ಆಸ್ಟ್ರೇಲಿಯಾ:ಭಾರತ ಗೆಲುವಿಗಾಗಿ ಕೊನೇಯವರೆಗೂ ಹೋರಾಡಿತಾದರೂ ಪಂದ್ಯ ಗೆಲ್ಲಲಾಗಲಿಲ್ಲ. ಇದರೊಂದಿಗೆ ಆಸ್ಟ್ರೇಲಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0ರಿಂದ ಸರಣಿ ಕೈವಶಪಡಿಸಿಕೊಂಡಿದೆ. ರನ್ ಗಳಿಸಲು ಕೊಹ್ಲಿ ಮತ್ತೆ ವಿಫಲ:ಇದಕ್ಕೂ ಮುನ್ನ, ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಅದರಂತೆ, ಇನ್ನಿಂಗ್ಸ್ ಪ್ರಾರಂಭಿಸಿದ ಭಾರತ, ಕಳಪೆ ಆರಂಭ ಪಡೆಯಿತು. ಕೇವಲ 17 ರನ್ಗಳಿಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಆರಂಭಿಕ ಶುಭ್ಮನ್ ಗಿಲ್ 9 ರನ್ ಗಳಿಸಿ ನಿರ್ಗಮಿಸಿದರೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ಶೂನ್ಯ ಸುತ್ತಿದರು. ಭಾರಿ ಸಂಕಷ್ಟದಲ್ಲಿದ್ದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ಆಸರೆಯಾದರು. ಇಬ್ಬರೂ 118 ರನ್ಗಳ ಜೊತೆಯಾಟವಾಡಿದರು.
ರೋಹಿತ್ ಶರ್ಮಾ 97 ಎಸೆತಗಳನ್ನು ಆಡಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 73 ರನ್ ಕಲೆಹಾಕಿದರು. ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಕ್ಯಾಚೌಟ್ ಆದರು. ಮತ್ತೊಂದೆಡೆ, ಅಯ್ಯರ್ ಸಹ ಅದ್ಭುತ ಪ್ರದರ್ಶನ ನೀಡಿದರು. ಇವರು 77 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 61 ರನ್ ಕೊಡುಗೆ ನೀಡಿದರು. ನಂತರ ಬಂದ ಅಕ್ಷರ್ ಪಟೇಲ್ 44 ರನ್, ವಾಷಿಂಗ್ಟನ್ ಸುಂದರ್ 12, ಕೆ.
ಎಲ್. ರಾಹುಲ್ 11, ನಿತೀಶ್ ರೆಡ್ಡಿ ಕೇವಲ 8 ರನ್ ಗಳಿಸಿದರು. ಕೊನೆಯಲ್ಲಿ ಹರ್ಷಿತ್ ರಾಣಾ (24) ಮತ್ತು ಅರ್ಷದೀಪ್ (13) ಮಿಂಚಿದರು. ಇದರಿಂದಾಗಿ, ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್ಗಳನ್ನು ಬಾರಿಸಿತು. ಆಸೀಸ್ ತಂಡದ ಆ್ಯಡಮ್ ಜಂಪಾ 4, ಕ್ಸೇವಿಯರ್ ಬಾರ್ಟ್ಲೆಟ್ 3 ವಿಕೆಟ್ ಪಡೆದರು.
ಗಿಲ್ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಸರಣಿ ಸೋಲು:ಈ ಸರಣಿಗಾಗಿ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಶುಭ್ಮನ್ ಗಿಲ್ ಅವರಿಗೆ ನಾಯಕನ ಜವಾಬ್ದಾರಿ ನೀಡಲಾಗಿತ್ತು. ಆದರೆ, ಗಿಲ್ ನಾಯಕತ್ವದಲ್ಲಿ ಭಾರತ ಆಡಿದ ಚೊಚ್ಚಲ ಏಕದಿನ ಸರಣಿಯನ್ನು 2-0ಯ ಅಂತರದಿಂದ ಸೋತಿದೆ. 3ನೇ ಏಕದಿನ ಪಂದ್ಯ: ಉಭಯ ತಂಡಗಳ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಅ. 25ರಂದು ನಡೆಯಲಿದೆ. ಇದಕ್ಕೆ ಸಿಡ್ನಿ ಮೈದಾನ ಆತಿಥ್ಯ ವಹಿಸುತ್ತಿದೆ.







