ವಿಶೇಷ ವರದಿ - ಹೆಚ್. ಬಿ. ಗಡ್ಡದಹುಬ್ಬಳ್ಳಿ:ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿನ ಸ್ಥಿರಾಸ್ತಿಗಳನ್ನು ನಿಖರವಾಗಿ ಗುರುತಿಸಲು ಕೈಗೆತ್ತಿಕೊಂಡಿರುವ ಜಿಐಎಸ್ ಸರ್ವೇ (ಜಿಯೋಗ್ರಾಫಿಕಲ್ ಇನ್‌ಫಾರ್ಮೆಶನ್ ಸಿಸ್ಟಮ್ -ಭೌಗೋಳಿಕ ಮಾಹಿತಿ ವ್ಯವಸ್ಥೆ) ಅಂತಿಮ ಹಂತ ತಲುಪಿದೆ. ಶೇ. 90 ರಷ್ಟು ಸರ್ವೇ ಕಾರ್ಯ ಮುಗಿದಿದ್ದು, ದತ್ತಾಂಶ ಸಂಗ್ರಹ ಬಾಕಿ ಉಳಿದುಕೊಂಡಿದೆ.
ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ವೀಡಾರ್ ಸೆನ್ಸಾರ್ ಅಳವಡಿಸಿದ ವಿಮಾನಗಳು ಅವಳಿ ನಗರದ ಆಗಸದಲ್ಲಿ ಹಾರಾಡುವ ಮೂಲಕ ಸಮೀಕ್ಷೆ ನಡೆಸಿವೆ. ವಿಶೇಷವಾದ ನಾದಿರ್ ಮತ್ತು ಒಬ್ಲಿಕ್ ಕ್ಯಾಮೆರಾಗಳನ್ನು ಹೊಂದಿದ ವಿಮಾನಗಳು ಹಾರಾಟದ ವೇಳೆ ನಗರದ ಉದ್ದಕ್ಕೂ ಉನ್ನತ ಗುಣಮಟ್ಟದ ಚಿತ್ರಗಳು ಹಾಗೂ ಭೌಗೋಳಿಕ ಅಂಶಗಳನ್ನು ಸೆರೆಹಿಡಿದಿವೆ. ಇವುಗಳನ್ನು ವಿಶ್ಲೇಷಿಸಿ ಟ್ರೂ ಆರ್ಥೋ ಇಮೇಜ್ ಮತ್ತು 3ಡಿ ಚಿತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ನೆಲ ಮಟ್ಟದ ಸಮೀಕ್ಷೆ ಹಾಗೂ ಡೇಟಾ ವಿಶ್ಲೇಷಣೆ ನಡೆಸಲಾಗುತ್ತಿದೆ. ಈಗಾಗಲೇ ಶೇ.
90 ರಷ್ಟು ಎಲ್ಲಾ ಹಂತದ ಸರ್ವೇ ಕಾರ್ಯ ಮುಕ್ತಾಯಗೊಂಡಿದೆ. ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಪ್ರತಿ ಮನೆಗೂ ಜಿಐಎಸ್ ತಾಂತ್ರಿಕ ತಂಡ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ತೆರಳಿ ಮೊಬೈಲ್ ಆ್ಯಪ್‌ನಲ್ಲಿ ಆಸ್ತಿಗಳ ಮಾದರಿ, ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇನ್ನಿತರ ಮಾಹಿತಿಯನ್ನು ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕುರಿತಂತೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಉಪ ಆಯುಕ್ತ ವಿಜಯಕುಮಾರ್ ಆರ್. ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಇಡೀ ದೇಹದಲ್ಲಿಯೇ ಹುಬ್ಬಳ್ಳಿ - ಧಾರವಾಡವನ್ನು ಪ್ಲಾನ್ ಸಿಟಿ ಮಾಡುವ ದೃಷ್ಟಿಯಿಂದ "ಜಿಐಎಸ್ ಸರ್ವೇ ಕೈಗೆತ್ತಿಕೊಳ್ಳಲಾಗಿದೆ. ವಿಮಾನಯಾನ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು ಈಗಾಗಲೇ ಸುಮಾರು 10 ದಿನಗಳ ಕಾಲ ವೈಮಾನಿಕ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.
14 ರೆಡಾರ್ ವಾಹನಗಳು ಹುಬ್ಬಳ್ಳಿ - ಧಾರವಾಡ ಸುತ್ತುವ ಮೂಲಕ ಅವಳಿ ನಗರದ 3 ಡಿ ಮ್ಯಾಪಿಂಗ್ ಮಾಡಲಾಗಿದೆ. ಈಗ ಡಾಟಾ ಸಂಗ್ರಹ ನಡೆಯುತ್ತಿದೆ. ಅವಳಿ ನಗರಗಳ ಭೌತಿಕ ಮಾದರಿಯನ್ನು ತ್ರಿಡಿ ರೂಪದಲ್ಲಿ ಕಂಪ್ಯೂಟರ್ನಲ್ಲಿ ಸೃಷ್ಟಿ ಮಾಡಲಾಗುತ್ತದೆ ಎಂದರು. 'DEM, DSM, DTM ಆಗಿ ವಿಭಾಗಿಸಲಾಗುತ್ತದೆ. DEM (Digital Elevation Model), DSM (Digital Surface Model), DTM (Digital Terrain Model) ಮೂಲಕ ಮಹಾನಗರ ಪಾಲಿಕೆಯ ಎಲ್ಲ ಆಸ್ತಿಗಳ ಮಾಹಿತಿ ಸಂಗ್ರಹ ಮಾಡಲಾಗಿದೆ.
ಈಗಾಲೇ ಶೇ. 90 ರಷ್ಟು ಸರ್ವೇ ಪೂರ್ಣ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು. 'ವೀಡಾರ್ ಸೆನ್ಸಾರ್ ಅಳವಡಿಸಿದ ವಿಮಾನವು ಅವಳಿ ನಗರದ ಆಗಸದಲ್ಲಿ ಹಾರಾಟ ಮಾಡಿ ನಾದಿರ್ ಮತ್ತು ಒಬ್ಲಿಕ್ ಕ್ಯಾಮೆರಾಗಳಿಂದ ನಗರದ ಕಟ್ಟಡ, ರಸ್ತೆ, ಮೈದಾನ ಸೇರಿದಂತೆ ಎಲ್ಲ ಭೌಗೋಳಿಕ ಚಿತ್ರಗಳನ್ನು ಸಂಗ್ರಹಿಸಿವೆ. ಭೂಮಿಯಿಂದ ಸುಮಾರು 5 ಸಾವಿರ ಅಡಿಗಳಷ್ಟು ಎತ್ತರದಿಂದ ನಗರದ ಉನ್ನತಮಟ್ಟದ ಛಾಯಾಚಿತ್ರಗಳು ಹಾಗೂ ಭೌಗೋಳಿಕ ವಿಶೇಷತೆಗಳನ್ನು ಸಂಗ್ರಹಿಸಿವೆ'. 'ಬಾಂಬೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಹಾರಾಟದ ವೇಳೆ ನಗರದ ಉದ್ದಕ್ಕೂ ಉನ್ನತ ಗುಣಮಟ್ಟದ ಚಿತ್ರಗಳು ಹಾಗೂ ಭೌಗೋಳಿಕ ಅಂಶಗಳನ್ನು ವಿಶ್ಲೇಷಿಸಿ ಟ್ರೂ ಆರ್ಥೋ ಇಮೇಜ್‌ಗಳನ್ನು ಮತ್ತು 3ಡಿ ಚಿತ್ರಗಳನ್ನು ಸ್ಟೀಚ್ ಮಾಡಲಾಗಿದೆ.
ಹುಬ್ಬಳ್ಳಿ - ಧಾರವಾಡ ನಗರದ ಅವಳಿ ಸಿಟಿಯನ್ನು 3ಡಿ ಮಾದರಿಯಲ್ಲಿ ಸೃಷ್ಟಿ ಮಾಡಲಾಗುತ್ತದೆ. ಸುಮಾರು 3789 ಕಿಮೀ ನಷ್ಟು ರಸ್ತೆ ವ್ಯಾಪ್ತಿಯಲ್ಲಿ ಬೊಲೆರೋ, ಸ್ಕಾರ್ಪಿಯೋಗಳ ಸರ್ವೇ ಮಾಡಿ ಆನ್ ರೋಡ್ ಡೇಟಾ ಹಾಗೂ ಎಲ್ಲಾ ಕಟ್ಟಡಗಳ ಸದ್ಯದ ಡೇಟಾ ಸಂಗ್ರಹ ಮಾಡಲಾಗಿದೆ. ಯಾವ ಕಟ್ಟಡ ಎಷ್ಟಿದೆ?. ಎಷ್ಟು ಜಾಗದಲ್ಲಿ ಕಟ್ಟಿದ್ದಾರೆ ಎಂಬ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ನಾಲ್ಕು ಚಕ್ರದ ವಾಹನಗಳು ಓಡಾಟದ ಜಾಗದಲ್ಲಿ ದ್ವಿಚಕ್ರ ವಾಹನಗಳಲ್ಲಿ ಮೊಬೈಲ್ ಬ್ಯಾಕ್ ಪ್ಯಾಕ್ ಇಟ್ಟುಕೊಂಡು ಸ್ಲಂ ಹಾಗೂ ಇಕ್ಕಾಟದ ಪ್ರದೇಶಗಳಲ್ಲಿ ಸಂಚರಿಸಿ, ಸ್ಕೂಲ್, ಕಾಲೇಜು, ರೈಲ್ವೆ, ಮೈದಾನ, ಬಸ್ ನಿಲ್ದಾಣ, ಆಸ್ಪತ್ರೆಗಳು, ಹೊಟೆಲ್ಗಳು ಎಷ್ಟು ಇವೆ ಎಂಬ ಎಲ್ಲಾ ಡೇಟಾಗಳನ್ನು ಸಂಗ್ರಹಿಸಲಾಗಿದೆ.
ಒಂದೇ ಕ್ಲಿಕ್ನಲ್ಲಿ ಎಲ್ಲಾ ಮಾಹಿತಿ ಲಭ್ಯವಾಗುವಂತೆ ಮಾಡಲಾಗುತ್ತಿದೆ' ಎಂದು ಉಪ ಆಯುಕ್ತರು ಮಾಹಿತಿ ನೀಡಿದರು. ಜಿಐಎಸ್ ಸರ್ವೇಯ ಮುಖ್ಯ ಉದ್ದೇಶ:ಈ ವೈಮಾನಿಕ ಸಮೀಕ್ಷೆ ಉದ್ದೇಶ ಪಾರದರ್ಶಕ ಆಧುನಿಕ ನಗರ ನಿರ್ವಹಣೆಗೆ ಮಹತ್ವದ ಸಾಧನವಾಗಲಿದೆ. ನಗರದ ಅಭಿವೃದ್ಧಿಗೆ ನಿಖರವಾಗಿ ಆಸ್ತಿ ತೆರಿಗೆ ಸಂಗ್ರಹ, ಸರ್ವೇ ಆದ ನಂತರ ಒಂದೇ ಕ್ಲಿಕ್ನಲ್ಲಿ ಯಾವ ವಾರ್ಡ್ನಲ್ಲಿ ಯಾವ ಕಟ್ಟಡ ಇದೆ. ಕಂಬ, ಉದ್ಯಾನ, ಸ್ಮಶಾನ, ಕೊಳೆಗೇರಿ, ರಸ್ತೆ ಎಷ್ಟಿವೆ? ಎಂಬ ಮಾಹಿತಿ ತಿಳಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ಸಂಪೂರ್ಣ ಮಾಹಿತಿ, ಒಳಚರಂಡಿಯ ಬಗ್ಗೆಯೂ ಮಾಹಿತಿ ತಿಳಿಯಬಹುದು.
ಜಿಐಎಸ್ ಮತ್ತು 3ಡಿ ಡಿಜಿಟಲ್ ಟ್ವಿನ್ ಜನರೇಷನ್, ಲಿಡಾರ್ ಸಮೀಕ್ಷೆ, 2D & 3D ಬೇಸ್ ಮ್ಯಾಪ್ ಜನರೇಷನ್, ಬಹುಪಯೋಗಿ ಗೃಹ ಸಮೀಕ್ಷೆ, ವೆಬ್ & ಮೊಬೈಲ್ ಜಿಐಎಸ್ ತಂತ್ರಾಂಶದ ಅಭಿವೃದ್ಧಿ ಸೇರಿದಂತೆ ಜಿಯೋಸ್ಪೇಷಿಯಲ್ ಮ್ಯಾನೇಜ್‌ಮೆಂಟ್ ಮಾಹಿತಿ ವ್ಯವಸ್ಥೆಯ ಅನುಷ್ಠಾನಕ್ಕಾಗಿ ಈ ಸರ್ವೇ ಅನುಕೂಲವಾಗಲಿದೆ. ಜಿಐಎಸ್ ಸರ್ವೇಯ ಮುಖ್ಯ ಉದ್ದೇಶ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆಸ್ತಿ ತೆರಿಗೆಯಲ್ಲಿ ಕಳ್ಳಾಟವಾಡುವವರನ್ನು ಗುರುತಿಸಲು ಅನುಕೂಲಕರವಾಗಲಿದೆ. ಆಸ್ತಿ ತೆರಿಗೆಯಿಂದ ಹೊರ ಉಳಿದವರನ್ನು ಗುರುತಿಸಬಹುದು. ಇದರಿಂದ ಮಹಾನಗರ ಪಾಲಿಕೆಗೆ ಶೇ.
40-50 ಆಸ್ತಿ ತೆರಿಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಸರ್ವೇ ಕಾರ್ಯ ಮುಗಿಸಿ ಕೊಡಲು 15 ತಿಂಗಳ ಕಾಲಮಿತಿ ನೀಡಲಾಗಿದೆ. 24 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಾದೇಶ ನೀಡಲಾಗಿದೆ. ಮುಂದಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮುಗಿಯಲಿದೆ ಎಂದು ವಿಜಯಕುಮಾರ್ ತಿಳಿಸಿದರು. ಮುಂಬೈ ಮೂಲದ ಕಂಪನಿಗೆ ಟೆಂಡರ್: ಈ 3ಡಿ ಜಿಐಎಸ್ ಸರ್ವೇಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಿಂದ 24 ಕೋಟಿಯಷ್ಟು ಖರ್ಚು ಮಾಡಲಾಗುತ್ತಿದ್ದು, ಮುಂಬೈ ಮೂಲದ ಜೆನಿಸಸ್ ಸಂಸ್ಥೆಗೆ ಟೆಂಡರ್ ನೀಡಲಾಗಿದೆ.
ಇದರ ಕೇಂದ್ರ ಕಚೇರಿ ಮುಂಬೈನಲ್ಲಿದ್ದು, ಕಂಪನಿಯು ಈಗಾಗಲೇ ದುಬೈ ಲ್ಯಾಂಡ್ ಮ್ಯಾಪಿಂಗ್, ವಾರಾಣಸಿಯ 3ಡಿ ಡಿಜಿಟಲ್ ಮ್ಯಾಪಿಂಗ್ ಮಾಡಿದೆ. ಬಾಂಬೆ ಸಿಟಿ ಪ್ಲಾನಿಂಗ್ ಅನ್ನು ಇದೇ ಕಂಪನಿ ಮ್ಯಾಪಿಂಗ್ ಮಾಡಿದೆ.








