Asia Cup 2025 Record: 17ನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಹಾಂಗ್‌ಕಾಂಗ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಅಫ್ಘಾನ್ ದೊಡ್ಡ ಗೆಲುವು ಸಾಧಿಸಿತು.
ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪವರ್‌ಪ್ಲೇನಲ್ಲಿ ತಂಡ ಹಿನ್ನಡೆ ಅನುಭವಿಸಿತು. ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ (8) 25 ರನ್‌ಗಳಿಗೆ ಔಟಾದರೆ, ಮತ್ತೊಬ್ಬ ಆರಂಭಿಕ ಇಬ್ರಾಹಿಂ ಜದ್ರಾನ್ (1) ಕೂಡ ಬೇಗನೆ ಪೆವಿಲಿಯನ್ ಸೇರಿದರು. 6 ಓವರ್‌ಗಳ ನಂತರ ತಂಡದ ಸ್ಕೋರ್ 56/2 ಆಗಿತ್ತು. ಈ ವೇಳೆ ಸೆದಿಕುಲ್ಲಾ ಅಟಲ್ ಮತ್ತು ಅಝ್ಮತುಲ್ಲಾ ಒಮರ್ಝಾಹಿ ಉತ್ತಮ ಪ್ರದರ್ಶನ ನೀಡಿ ಅರ್ಧಶತಕ ಪೂರ್ಣಗೊಳಿಸಿದರು. ಇದರೊಂದಿಗೆ ತಂಡಕ್ಕೆ ಬಲವಾದ ಬೆಂಬಲ ನೀಡಿದರು.
ಒಮರ್‌ಝಾಯಿ ಬಿರುಸಿನ ಪ್ರದರ್ಶನ ನೀಡಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸುವ ಮೂಲಕ ವೇಗವಾಗಿ ಅರ್ಧಶತಕ ಪೂರ್ಣಗೊಳಿಸಿ ದಾಖಲೆ ಬರೆದರು. ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ 53 ರನ್ ಬಾರಿಸಿ ನಿರ್ಗಮಿಸಿದರು. ಇದರಿಂದಾಗಿ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಹಾಂಗ್‌ಕಾಂಗ್ 94 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಅಫ್ಘಾನ್ 94 ರನ್ಗಳಿಂದ ಜಯಿಸಿತು. ಇದರೊಂದಿಗೆ ಅಝ್ಮತುಲ್ಲಾ ಒಮರ್ಝಾಹಿ ದಾಖಲೆ ಬರೆದರು.
ಒಮರ್‌ಝಾಯಿ ದಾಖಲೆಯ ಬ್ಯಾಟಿಂಗ್: ಈ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಒಮರ್‌ಝಾಯಿ ಅವರು ಅಫ್ಘಾನಿಸ್ತಾನ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ದಾಖಲೆ ನಿರ್ಮಿಸಿದರು. ಈ ಹಿಂದೆ ಈ ದಾಖಲೆಯನ್ನು ಅನುಭವಿ ಆಟಗಾರ ಮೊಹಮ್ಮದ್ ನಬಿ ಹೊಂದಿದ್ದರು. 2017ರಲ್ಲಿ ಐರ್ಲೆಂಡ್ ವಿರುದ್ಧ 21 ಎಸೆತಗಳಲ್ಲಿ ಅವರು ಅರ್ಧಶತಕ ಬಾರಿಸಿದ್ದರು. ಆದರೆ ಒಮರ್‌ಜೈ ಈಗ ಅದನ್ನು ಮುರಿದು ಹೊಸ ದಾಖಲೆ ಸ್ಥಾಪಿಸಿದ್ದಾರೆ.
ಇದಲ್ಲದೆ, ಏಷ್ಯಾಕಪ್‌ನಲ್ಲಿ ಅತಿ ವೇಗದ ಅರ್ಧಶತಕದ ದಾಖಲೆಯನ್ನೂ ಸಹ ನಿರ್ಮಿಸಿದರು. ಇದಕ್ಕೂ ಮೊದಲು, 2022ರಲ್ಲಿ ಹಾಂಗ್‌ಕಾಂಗ್ ವಿರುದ್ಧ 22 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಹೆಸರಲ್ಲಿತ್ತು. ಇದೀಗ ಒಮರ್‌ಝಾಯಿ ಇದನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಏಷ್ಯಾಕಪ್‌ನಲ್ಲಿ (ಟಿ20) ವೇಗದ ಅರ್ಧಶತಕ ಸಿಡಿಸಿದ ಆಟಗಾರರು:
- ಅಝ್ಮತುಲ್ಲಾ ಒಮರ್ಝಾಹಿ (ಅಫ್ಘಾನಿಸ್ತಾನ) - 20 ಎಸೆತಗಳು
- ಸೂರ್ಯಕುಮಾರ್ ಯಾದವ್ (ಭಾರತ) - 22 ಎಸೆತಗಳು
- ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ) - 22 ಎಸೆತಗಳು
ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಅಫ್ಘಾನಿಸ್ತಾನ ಬ್ಯಾಟರ್‌ಗಳು:
- ಅಝ್ಮತುಲ್ಲಾ ಒಮರ್ಝಾಹಿ - 20 ಎಸೆತಗಳು
- ಮುಹಮ್ಮದ್ ನಬಿ - 21 ಎಸೆತಗಳು
- ಗುಲ್ಬದಿನ್ ನೈಬ್ - 21 ಎಸೆತಗಳು
ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ: ಐಸಿಸಿ ಏಕದಿನ ಆಲ್ರೌಂಡರ್ಗಳ ಹೊಸ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದ್ದು, ಒಮರ್ಝಾಹಿ ಅಗ್ರಸ್ಥಾನ ತಲುಪಿದ್ದಾರೆ. ಈ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಮರ್‌ಝಾಯಿ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಇದೇ ಮೊದಲ ಬಾರಿಗೆ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಮೊಹ್ಮದ್ ನಬಿ ಈ ಸ್ಥಾನ ಅಲಂಕರಿಸಿದ್ದರು.