ರಾಯ್ಪುರ್(ಛತ್ತೀಸ್ಗಢ):ಬಸ್ತಾರ್ ಒಲಿಪಿಂಕ್ಸ್-2025ಕ್ಕೆ ಇಲ್ಲಿಯವರೆಗೆ ರಾಜ್ಯದ 7 ಜಿಲ್ಲೆಗಳಿಂದ ಬಸ್ತಾರ್ ವಲಯದಿಂದ 3,91,289 ಅಥ್ಲೀಟ್ಗಳು ನೋಂದಣಿ ಮಾಡಿದ್ದಾರೆ. ಅಕ್ಟೋಬರ್ 25ರಿಂದ ನವೆಂಬರ್ 2025ರವರೆಗೆ ಬ್ಲಾಕ್ ಮಟ್ಟದ ಸ್ಪರ್ಧೆಗಳು ನಡೆಯಲಿವೆ. ಇದಾದ ಬಳಿಕ ಜಿಲ್ಲಾ ಮಟ್ಟ ಮತ್ತು ವಲಯ ಮಟ್ಟದ ಸ್ಪರ್ಧೆ ನಡೆಯಲಿವೆ. ಬಸ್ತಾರ್ ಕ್ರೀಡಾ ಪ್ರತಿಭೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಸ್ತಾರ್ ಒಲಿಂಪಿಕ್ಸ್‌ನಲ್ಲಿ 100ಮೀ, 200ಮೀ, 400 ಮೀ, ಲಾಂಗ್ ಜಂಪ್, ಹೈ ಜಂಪ್, ಶಾಟ್ಪುಟ್, ಡಿಸ್ಕಸ್ ಥ್ರೋ, ಜಾವಲಿನ್ ಥ್ರೋ, 4x100ಮೀ ರಿಲೇ ಓಟದಂತಹ ಕ್ರೀಡೆಗಳಿರಲಿವೆ.
ಇದರ ಜೊತೆಗೆ, ಜಿಲ್ಲಾ ಮಟ್ಟದಲ್ಲಿ ಆರ್ಚರಿ, ಫುಟ್ಬಾಲ್, ಕಬ್ಬಡಿ, ಖೋ-ಖೋ, ಬ್ಯಾಡ್ಮಿಂಟನ್, ಕರಾಟೆ, ವಾಲಿಬಾಲ್ ಮತ್ತು ಹಗ್ಗ ಎಳೆಯುವ ಆಟ ಸೇರಿದಂತೆ ಹಾಕಿ, ವೈಟ್ಲಿಫ್ಟಿಂಗ್ ಇರಲಿದೆ. ಇಲ್ಲಿ ಕೇವಲ ಆಧುನಿಕ ಕ್ರೀಡೆಯನ್ನು ಮಾತ್ರ ಉತ್ತೇಜಿಸದೇ ಸ್ಥಳೀಯ ಸಾಂಪ್ರದಾಯಿಕ ಆಟಗಳಿಗೂ ವೇದಿಕೆ ಕಲ್ಪಿಸಲಾಗುತ್ತಿದೆ. ಮನ್ ಕೀ ಬಾತ್ನಲ್ಲಿ ಉಲ್ಲೇಖಿಸಿದ್ದ ಮೋದಿ:ಬಸ್ತರ್ ಒಲಿಂಪಿಕ್ಸ್ ಕುರಿತು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ಬಸ್ತಾರ್ ಒಲಿಂಪಿಕ್ಸ್ ಕೇವಲ ಕ್ರೀಡಾ ಕಾರ್ಯಕ್ರಮವಲ್ಲ. ಇದು ಅಭಿವೃದ್ಧಿ ಮತ್ತು ಕ್ರೀಡೆಗೆ ವೇದಿಕೆಯಾಗಲಿದೆ.
ಹೊಸ ಭಾರತ ನಿರ್ಮಾಣದಲ್ಲಿ ಯುವಜನರಿಗೆ ಅವಕಾಶ ನೀಡಲಿದೆ ಎಂದು ತಿಳಿಸಿದ್ದರು. ಶರಣಾದ ನಕ್ಸಲರಿಗೂ ಅವಕಾಶ:ಬಸ್ತಾರ್ ಒಲಿಂಪಿಕ್ಸ್ ಜೂನಿಯರ್ 14-17 ವರ್ಷ ಮತ್ತು ಹಿರಿಯರ ವಿಭಾಗಗಳನ್ನು ಹಾಗೂ ವಿಶೇಷ ವಿಭಾಗವನ್ನೂ ಒಳಗೊಂಡಿದೆ. ನಕ್ಸಲ್ ಹಿಂಸಾಚಾರದಿಂದ ಅಂಗವಿಕಲರಾದ ವ್ಯಕ್ತಿಗಳು ಮತ್ತು ಶರಣಾದ ನಕ್ಸಲರಿಗೂ ಕೂಡ ಈ ಕಾರ್ಯಕ್ರಮದಲ್ಲಿ ವೇದಿಕೆ ನೀಡಲಾಗುತ್ತಿದೆ. ಇದು ಕ್ರೀಡೆಗಳ ಮೂಲಕ ಪುನರ್ವಸತಿ, ಪುನರುಜ್ಜೀವನ ಮತ್ತು ಸಾಮಾಜಿಕ ಏಕೀಕರಣದ ಕಡೆಗೆ ಒಂದು ಐತಿಹಾಸಿಕ ಹೆಜ್ಜೆ. ಶರಣಾದ ನಕ್ಸಲರ ಸೇರ್ಪಡೆಯು ಬಸ್ತಾರ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಶಸ್ತಿಗಳು:ಜಿಲ್ಲಾ ಮತ್ತು ವಿಭಾಗೀಯ ಮಟ್ಟದಲ್ಲಿ ಗೆದ್ದವರಿಗೆ ನಗದು ಬಹುಮಾನ, ಪದಕ, ಟ್ರೋಫಿ, ಶೀಲ್ಡ್ ನೀಡಲಾಗುತ್ತದೆ. ನಗದು ಹಣವನ್ನು ಕ್ರೀಡಾಳುಗಳ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ. ವಲಯ ಮಟ್ಟದ ವಿಜೇತರನ್ನು ಬಸ್ತಾರ್ ಯೂತ್ ಐಕಾನ್ ಆಗಿ ಮಾಡಲಾಗುತ್ತದೆ. ಬಸ್ತಾರ್‌ನ ಯುವಕರನ್ನು ಮುಖ್ಯವಾಹಿನಿಗೆ ಸೇರಿಸುವುದು, ಪ್ರತಿಭೆ ಅನಾವರಣ ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶ. ಈ ಉಪಕ್ರಮವು ಕೇವಲ ಕ್ರೀಡಾಕೂಟವಲ್ಲ, ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ವಿಶ್ವಾಸ ಮತ್ತು ಸಂವಾದದ ಸೇತುವೆಯೂ ಆಗಿದೆ.
ಇವುಗಳನ್ನೂ ಓದಿ:.






