ಚಿಕ್ಕೋಡಿ:ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್ ಪಕ್ಷ ಸೇರುವಾಗ ನಾನು ಅವರಿಗೆ ಹಣಕ್ಕೆ ಬೇಡಿಕೆ ಇಟ್ಟಿದೆ ಎಂದು ಆಧಾರ ರಹಿತವಾಗಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರು ನಾನು ಯಾವಾಗ ಹಣ ಕೇಳಿದ್ದೇನೆ ಎಂದು ಸಾಬೀತು ಪಡಿಸಬೇಕು. ನಾನು ಹಣ ಕೇಳಿಲ್ಲ ಎಂದು ಅಥಣಿ ಸಿದ್ದೇಶ್ವರ ಮಂದಿರ ಹಾಗೂ ಧರ್ಮಸ್ಥಳ ಮಂಜುನಾಥ ಸನ್ನಿಧಿಗೆ ಆಣೆ ಪ್ರಮಾಣ ಮಾಡುವುದಕ್ಕೆ ಬರುತ್ತೇನೆ, ಸವದಿ ಅವರು ಬರಬೇಕು ಎಂದು 2019ರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಜಾನನ ಮಂಗಸುಳಿ ಆಹ್ವಾನಿಸಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಾರ ಹಿಂದೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಶಾಸಕ ಸವದಿ ಅವರು ನನ್ನ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾರೆ. ನಾನು ಅವರ ಕಡೆ ಯಾವುದೇ ಒಂದು ನಯಾ ಪೈಸೆಗೂ ಆಸೆ ಪಟ್ಟಿಲ್ಲ.
ಆದರೆ, ಸವದಿ ಅವರ ಈ ಆರೋಪ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ಕಣ್ಣೀರು ಹಾಕಿದರು. ಸುಖಾಸುಮ್ಮನೆ ಆರೋಪ ಮಾಡಿದರೆ ಕಾನೂನು ಹೋರಾಟದ ಎಚ್ಚರಿಕೆ: ಹಲವಾರು ವರ್ಷಗಳಿಂದ ಪಕ್ಷವನ್ನು ಸಂಘಟನೆ ಮಾಡಿಕೊಂಡು ಬಂದಾಗ, ಅನಿರೀಕ್ಷಿತವಾಗಿ ಸವದಿ ಕಾಂಗ್ರೆಸ್ ಪಕ್ಷಕ್ಕೆ ಬಂದರು. ಪಕ್ಷ ಸೇರಿದ ಮೇಲೆ ನೇರವಾಗಿ ನನ್ನ ಮನೆಗೆ ಆಗಮಿಸಿದರು. ಆ ಸಂದರ್ಭದಲ್ಲಿ ಸವದಿ ನನಗೆ ಸಮಾಧಾನಪಡಿಸಿ ನಿನಗೆ ನಿಗಮ ಸ್ಥಾನವನ್ನು ಕೊಡಿಸಲಾಗುವುದೆಂದು ಮಾತು ನೀಡಿದರು. ಅವರ ಮಾತಿಗೆ ನಾನು ಅವರಿಗೆ ಬೆಂಬಲ ಕೊಟ್ಟು, ಅವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಲಾಯಿತು.
ಆದರೆ ಲಕ್ಷ್ಮಣ್ ಸವದಿ ಅವರು ಇದನ್ನೆಲ್ಲ ಮರೆತು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಸುಖಾ-ಸುಮ್ಮನೆ ಆರೋಪ ಮಾಡಿದರೆ ಕಾನೂನು ಹೋರಾಟ ಪ್ರಕ್ರಿಯೆ ಪ್ರಾರಂಭಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಮೂವತ್ತು ವರ್ಷಗಳಿಂದ ನಾನು ನಮ್ಮ ಹಿರಿಯರು ಗಳಿಸಿದ ಆಸ್ತಿ ಮಾರಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಈ ಶಾಸಕರ ಥರ ಆಸ್ತಿ ಮಾಡಿಲ್ಲ. ನನ್ನ ಹಾಗೂ ಅವರ ಆಸ್ತಿ ಗಳಿಕೆ ಬಗ್ಗೆ ಸಿಬಿಐ, ಐಟಿ ಇಲಾಖೆಗಳಿಂದ ತನಿಖೆ ಮಾಡಿ.
ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ, ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಶಾಸಕ ಲಕ್ಷ್ಮಣ್ ಸವದಿ ರೀತಿಯಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿದು ರಾಜಕಾರಣ ಮಾಡಿಲ್ಲ. ಕಳೆದ 31 ವರ್ಷಗಳಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದೇನೆ. ಸವದಿ ಮಾತು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕ ಲಕ್ಷ್ಮಣ್ ಸವದಿ 76 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಆದರೆ ನೀವು ಮೂಲ ಕಾಂಗ್ರೆಸ್ ಹಾಗೂ ಮುಖಂಡರನ್ನು ಯಾವ ರೀತಿ ನಡೆಸಿಕೊಂದ್ದೀರಿ? ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಎಷ್ಟು ಜನ ಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿರಿ? ಪಕ್ಷದ ಸಭೆ ಸಂದರ್ಭಗಳಲ್ಲಿ ಎಷ್ಟು ಜನ ಮೂಲ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಆಹ್ವಾನ ನೀಡಿದ್ದೀರಿ? ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವು ಏನು ಮಾಡಿದ್ದೀರಿ? ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವಾಗ ನಮ್ಮ ನೋವು ಗೊತ್ತಾಗುತ್ತದೆ ಎಂದರು.








