ದೆಹಲಿ ವಾಯುಗುಣಮಟ್ಟ ತೀವ್ರ ಕಳಪೆ: ಇಂದು ಮೊಟ್ಟ ಮೊದಲ ಮೋಡ ಬಿತ್ತನೆಗೆ ಸಿದ್ಧತೆ

ದೆಹಲಿ ವಾಯುಗುಣಮಟ್ಟ ತೀವ್ರ ಕಳಪೆ: ಇಂದು ಮೊಟ್ಟ ಮೊದಲ ಮೋಡ ಬಿತ್ತನೆಗೆ ಸಿದ್ಧತೆ
By Published : October 28, 2025 at 2:52 PM IST

ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಿದೆ. ಇಂದು ಮೋಡ ಕವಿದ ವಾತಾವರಣ ಮತ್ತು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕ 305 AQI ದಾಖಲಾಗಿದ್ದು, ಇದನ್ನು ತೀವ್ರ ಕಳಪೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿದೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ನೀರಿನ ಸಿಂಪಡಣೆ ಮಾಡಲಾಗುತ್ತಿದೆ. ಕೃತಕ ಮಳೆ:ಇನ್ನು ಪರಿಸ್ಥಿತಿ ಹದಗೆಡುತ್ತಿರುವುದರಿಂದ ದೆಹಲಿ ಸರ್ಕಾರ ಕೃತಕ ಮಳೆ ಸುರಿಸುವ ಯೋಜನೆ ಹಾಕಿಕೊಂಡಿದೆ.

ಅದರಂತೆ ಇಂದಿನ ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ, ತನ್ನ ಮೊದಲ ಮೋಡ ಬಿತ್ತನೆ ಪ್ರಯೋಗ ನಡೆಸಲಿದೆ. ಮೋಡ ಬಿತ್ತನೆ ಕಾರ್ಯಾಚರಣೆಗೆ ಸಜ್ಜುಗೊಂಡ ವಿಮಾನವು ಕಾನ್ಪುರದಿಂದ ದೆಹಲಿಗೆ ಈಗಾಗಲೇ ಆಗಮಿಸಿದೆ. ಹವಾಮಾನವು ಹೊಂದಿಕೆಯಾದಲ್ಲಿ ನಾವಿಂದು ಮೋಡ ಬಿತ್ತನೆ ಪ್ರಯೋಗವನ್ನು ಪ್ರಯತ್ನಿಸುತ್ತೇವೆ. ಪ್ರಸ್ತುತ ಗೋಚರತೆ 2,000 ಮೀಟರ್‌ನಲ್ಲಿದೆ. ಅದು 5,000 ಮೀಟರ್ ತಲುಪಿದ ನಂತರ ವಿಮಾನವು ಪ್ರಾಯೋಗಿಕ ಪರೀಕ್ಷೆಗೆ ಹೊರಡುತ್ತದೆ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ದೃಢಪಡಿಸಿದರು.

ದೆಹಲಿಯ ಮಾಲಿನ್ಯ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಈ ಕ್ರಮ 'ಪ್ರವರ್ತಕ ಹೆಜ್ಜೆ' ಎಂದು ಶ್ಲಾಘಿಸಿರುವ ಸಿಎಂ ರೇಖಾ ಗುಪ್ತಾ, "ಮೋಡ ಬಿತ್ತನೆ ದೆಹಲಿಗೆ ಅಗತ್ಯವಾಗಿದೆ. ಈ ಪ್ರಯೋಗವು ನಮ್ಮ ಪರಿಸರ ಸವಾಲುಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡುತ್ತದೆ" ಎಂದಿದ್ದಾರೆ. "ದೆಹಲಿ ಮತ್ತು ಪಕ್ಕದ ಪ್ರದೇಶಗಳ ಮೇಲೆ ಮೋಡಗಳಿವೆ. ಮೋಡದ ಎತ್ತರವು ಮಿತಿಗಿಂತ ಹೆಚ್ಚಿದ್ದರೂ ಮೋಡಗಳಲ್ಲಿ ಸಾಕಷ್ಟು ತೇವಾಂಶವಿದೆ. ಹಾಗಾಗಿ ಮೋಡ ಬಿತ್ತನೆ ನಡೆಯಬಹುದು.

ಇದು ನೈಸರ್ಗಿಕ ಮಳೆಯಷ್ಟು ತೀವ್ರವಾಗಿರುವುದಿಲ್ಲ. ಆದರೆ, ಚದುರಿದ ಮಳೆ ಸಂಭವಿಸಬಹುದು. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ಸ್ಕೈಮೆಟ್ ವೆದರ್‌ನ ಉಪಾಧ್ಯಕ್ಷ ಮಹೇಶ್ ಪಲಾವತ್ ತಿಳಿಸಿದ್ದಾರೆ. ಕೃತಕ ಮಳೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ (IMD) ಈ ಹಿಂದೆ ಸೂಚನೆ ನೀಡಿತ್ತು. ಸೋಮವಾರ ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ ಗರಿಷ್ಠ ತಾಪಮಾನ 29.

5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 2. 3 ಡಿಗ್ರಿ ಸೆಲ್ಸಿಯಸ್ ಕಡಿಮೆ. ಗರಿಷ್ಠ ತಾಪಮಾನ ಭಾನುವಾರಕ್ಕೆ ಹೋಲಿಸಿದರೆ 3. 6 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಕನಿಷ್ಠ ತಾಪಮಾನ 17.

3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 0. 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿಂದು ಕನಿಷ್ಠ ತಾಪಮಾನವು ಸುಮಾರು 18 ಡಿಗ್ರಿ ಸೆಲ್ಸಿಯಸ್ ​ಇದ್ದರೆ, ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು 31 ಡಿಗ್ರಿ ಸೆಲ್ಸಿಯಸ್ ನಡುವೆ ಇರುವ ಸಾಧ್ಯತೆಯಿದೆ. ಸಂಜೆ ಲಘು ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಮೋಡ ಬಿತ್ತನೆ ಎಂದರೇನು?:ಮೋಡ ಬಿತ್ತನೆ ವಾತಾವರಣಕ್ಕೆ ಅಯೋಡೈಡ್ (AgI) ಬಿಡುಗಡೆ ಮಾಡುವ ಮೂಲಕ ಹವಾಮಾನವನ್ನು ಬದಲಾಯಿಸಲು ಬಳಸುವ ಒಂದು ತಂತ್ರ.

ಇದು ಮಂಜುಗಡ್ಡೆಯ ಹರಳುಗಳ ರಚನೆಯನ್ನು ಉತ್ತೇಜಿಸುತ್ತದೆ ಮತ್ತು ಮಳೆ ಉತ್ಪಾದಿಸುವ ಮೋಡದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆಳ್ಳಿ ಅಯೋಡೈಡ್ ಮೋಡಗಳಲ್ಲಿ ಮಂಜುಗಡ್ಡೆಯ ನ್ಯೂಕ್ಲಿಯಸ್‌ಗಳನ್ನು ರೂಪಿಸಲು ಸಹಾಯ ಮಾಡುತ್ತದೆ, ಇದು ಕೃತಕ ಮಳೆಗೆ ಅವಶ್ಯಕ. ಮೋಡ ಬಿತ್ತನೆಯ ವೇಳೆ ಸಿಲ್ವರ್ ಅಯೋಡೈಡ್, ಪೊಟ್ಯಾಸಿಯಮ್ ಅಯೋಡೈಡ್ ಮತ್ತು ಡ್ರೈ ಐಸ್‌ನಂತಹ ರಾಸಾಯನಿಕಗಳನ್ನು ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಂದ ಆಕಾಶಕ್ಕೆ ಸಿಂಪಡಿಸಲಾಗುತ್ತದೆ. ಈ ರಾಸಾಯನಿಕಗಳು ನೀರಿನ ಆವಿಯನ್ನು ಆಕರ್ಷಿಸುತ್ತವೆ, ಮಳೆ ಮೋಡಗಳನ್ನು ರೂಪಿಸಲು ಸಹಾಯ ಮಾಡುತ್ತವೆ. ಈ ವಿಧಾನವು ಸಾಮಾನ್ಯವಾಗಿ ಮಳೆಯನ್ನು ಉತ್ಪಾದಿಸಲು ಸುಮಾರು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಮುಂಬರುವ ದಿನಗಳ ಹವಾಮಾನ ಮುನ್ಸೂಚನೆ:ಭಾರತ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಇಂದು ಮೋಡ ಕವಿದಿರುತ್ತದೆ. ದೆಹಲಿ-ಎನ್‌ಸಿಆರ್‌ನ ಹಲವು ಭಾಗಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದ್ದು, ಬಿಸಿಲಿನ ಕೊರತೆ ಇರುತ್ತದೆ. ಗಾಳಿಯು ಗಂಟೆಗೆ 10 ಕಿಲೋಮೀಟರ್ ವೇಗದಲ್ಲಿ ಬೀಸುತ್ತದೆ. ದೆಹಲಿ-ಎನ್‌ಸಿಆರ್‌ನಲ್ಲಿ ಅಕ್ಟೋಬರ್ 30 ರಿಂದ ನವೆಂಬರ್ 2 ರವರೆಗೆ ಗರಿಷ್ಠ ತಾಪಮಾನವು ಮತ್ತೆ ಏರಿಕೆಯಾಗಿ ಸುಮಾರು 32 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ. ಕನಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಮುನ್ಸೂಚನೆ ಇದೆ ಎಂದು ತಿಳಿಸಿದೆ.

ಮಂಗಳವಾರ ಬೆಳಿಗ್ಗೆ 7:00 ಗಂಟೆಯ ಹೊತ್ತಿಗೆ, ರಾಜಧಾನಿ ದೆಹಲಿಯಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 305 ರಲ್ಲೇ ಉಳಿದಿದ್ದರೆ, ದೆಹಲಿ-ಎನ್‌ಸಿಆರ್ ನಗರಗಳಾದ ಫರಿದಾಬಾದ್‌ನಲ್ಲಿ 293, ಗಾಜಿಯಾಬಾದ್ 288, ಗ್ರೇಟರ್ ನೋಯ್ಡಾ 273, ನೋಯ್ಡಾ 275 ಮತ್ತು ಗುರುಗ್ರಾಮ್ 268 ದಾಖಲಾಗಿವೆ. ರಾಜಧಾನಿ ದೆಹಲಿಯ ಹೆಚ್ಚಿನ ಪ್ರದೇಶಗಳಲ್ಲಿ, ವಾಯು ಗುಣಮಟ್ಟ ಸೂಚ್ಯಂಕ 300 ಮತ್ತು 400ರ ನಡುವೆ ಉಳಿದಿದ್ದರೆ, ಕೆಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 200 ಮತ್ತು 300ರ ನಡುವೆ ಇತ್ತು.

📚 Related News