Quick Summary
This article highlights: . In context: ಹೈದರಾಬಾದ್: ನೀವು ಫೋಟೋದಲ್ಲಿ ನೋಡುತ್ತಿರುವ ಯುವಕನ ಹೆಸರು ವಿಕ್ರಾಂತ್ ಈತನ ಇನ್ನೊಂದು ಹೆಸರು ರಿಷಿ ಅರೋಥೆ. Stay tuned with The Headline World for more insights and details.
ಹೈದರಾಬಾದ್: ನೀವು ಫೋಟೋದಲ್ಲಿ ನೋಡುತ್ತಿರುವ ಯುವಕನ ಹೆಸರು ವಿಕ್ರಾಂತ್. ಈತನ ಇನ್ನೊಂದು ಹೆಸರು ರಿಷಿ ಅರೋಥೆ. 30 ವರ್ಷ. ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಏನಾದರೂ ಸಾಧಿಸುವ ಛಲವಿತ್ತು. ಮೈದಾನದಲ್ಲಿ ಮಿಂಚಲು ಬೇಕಾದ ಹಿನ್ನೆಲೆ, ಪ್ರತಿಭೆ ಎರಡೂ ಬೆನ್ನಿಗಿತ್ತು.
ಬರೋಡಾದ ಮಾಜಿ ರಣಜಿ ಕ್ರಿಕೆಟಿಗ ಮತ್ತು ತರಬೇತುದಾರ ತುಷಾರ್ ಅರೋಥೆ ಅವರ ಮಗ ಈತ. ತಾಯಿ ಸರ್ಕಾರಿ ಶಿಕ್ಷಕಿ. ಪೋಷಕರಿಗೆ ತಮ್ಮ ಮಗ ಭಾರತ ಕ್ರಿಕೆಟ್ ತಂಡದ ಜೆರ್ಸಿ ತೊಟ್ಟು ಆಡುವುದನ್ನು ನೋಡುವ ಹಂಬಲ. ಅದರಂತೆ, ಆರಂಭದಲ್ಲಿ ರಿಷಿ ಭರವಸೆಯನ್ನೂ ಮೂಡಿಸಿದ್ದ. ಬಿ.ಟೆಕ್ ಶಿಕ್ಷಣ ಮುಗಿಸಿದ್ದಾನೆ. ಬರೋಡಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು, ಪ್ರತಿಭೆ ಮತ್ತು ಸಮರ್ಪಣೆಯಿಂದ ಹೆಸರು ಕೂಡಾ ಮಾಡಿದ್ದ.
ಮುಂದೆ, ರಿಷಿಯ ಬದುಕು ಕಥೆ ಕರಾಳ ತಿರುವು ಪಡೆಯಿತು. ರಿಷಿಗೆ ಬೆನ್ನು ಬಗ್ಗಿಸಿ ಪರಿಶ್ರಮದಿಂದ ಹಣ ಗಳಿಸುವುದು ಪಥ್ಯವಾಗಲಿಲ್ಲ. ವೇಗದ ಗಳಿಕೆಯ ಆಕರ್ಷಣೆ ಹೆಚ್ಚಾಯಿತು. ಹೀಗಾಗಿ ಕ್ರಮೇಣ ಕ್ರಿಕೆಟ್‌ನಿಂದ ದೂರ ಸರಿದುಬಿಟ್ಟ. ಐಪಿಎಲ್ ಬೆಟ್ಟಿಂಗ್, ಕ್ಯಾಸಿನೊಗಳು ಮತ್ತು ಸೈಬರ್ ಅಪರಾಧಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ. ಗೋವಾಕ್ಕೆ ತೆರಳಿದ ಈತನಿಗೆ ಸೈಬರ್ ಅಪರಾಧಿಗಳ ಪರಿಚಯವಾಯಿತು. ಆನ್‌ಲೈನ್ ವಂಚನೆಯ ಮೂಲಕ ಹಣ ಗಳಿಸುವುದನ್ನು ಕರಗತ ಮಾಡಿಕೊಂಡ. ಇದಕ್ಕಾಗಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆದ. ಜನರಿಗೆ ಹೂಡಿಕೆಯ ನಕಲಿ ಲಿಂಕ್‌ಗಳನ್ನು ಕಳುಹಿಸಲು ಶುರು ಮಾಡಿದ. ತನ್ನ ಖೆಡ್ಡಾಕ್ಕೆ ಬಿದ್ದ ಅಮಾಯಕರಿಗೆ ಬಗೆಬಗೆಯ ಆಮಿಷವೊಡ್ಡಿದ.
ಇದಕ್ಕಾಗಿ ರಿಷಿ ಅತ್ಯಾಧುನಿಕ ಕಾರ್ಯಾಚರಣಾ ವಿಧಾನಗಳನ್ನು ಅಭಿವೃದ್ಧಿಪಡಿಸಿದ. ಮೋಸದ ಹಣ ಸ್ವೀಕರಿಸಲು, ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಲು ಮತ್ತು ಅದನ್ನು ವಿದೇಶಕ್ಕೆ ವರ್ಗಾಯಿಸಲು ಬಾಡಿಗೆ ಅಥವಾ 'ಮ್ಯೂಲ್' ಖಾತೆಗಳನ್ನು ಸ್ಥಾಪಿಸುತ್ತಿದ್ದ. ಪ್ರತೀ 1 ಕೋಟಿ ರೂಪಾಯಿ ಹಣ ವರ್ಗಾವಣೆಗೆ 10 ಲಕ್ಷದವರೆಗೂ ಕಮಿಷನ್ ಗಳಿಸುತ್ತಿದ್ದ ಎಂಬ ವಿಚಾರ ಮುಂದೆ ತನಿಖೆಯಿಂದ ಗೊತ್ತಾಗುತ್ತದೆ. ಇತರರ ಹೆಸರಿನಲ್ಲಿ ಸಿಮ್ ಕಾರ್ಡ್‌ಗಳು ಮತ್ತು ಇಂಟರ್ನೆಟ್ ಸಂಪರ್ಕಗಳನ್ನು ಬಳಸಿ, ಯಾವುದೇ ಕಾರಣಕ್ಕೂ ಪೊಲೀಸರ ಕೈಗೆ ಸಿಕ್ಕಿಬೀಳದಂತೆಯೂ ಕಟ್ಟೆಚ್ಚರ ವಹಿಸಿದ್ದ.
ಮಗ ಹೋಗುತ್ತಿರುವ ದಾರಿ ಸರಿ ಇಲ್ಲ. ಅಡ್ಡ ದಾರಿಯಲ್ಲಿ ಸಾಗುತ್ತಿರುವ ವಿಚಾರ ತಿಳಿದ ತಾಯಿ, ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ಸರಿಯಾದ ಹಾದಿಯಲ್ಲೇ ಹಣ ಸಂಪಾದನೆ ಮಾಡುವಂತೆ ಸಾಕಷ್ಟು ಬಾರಿ ಸಲಹೆ, ಮಾರ್ಗದರ್ಶನವನ್ನು ನೀಡುತ್ತಿದ್ದರಂತೆ. ಆದರೆ ಅದಾಗಲೇ ಕಾಲ ಮಿಂಚಿ ಹೋಗಿತ್ತು. ರಿಷಿ ಅದ್ಯಾವುದನ್ನೂ ಕೇಳದ ಮಟ್ಟಕ್ಕೆ ಹೋಗಿಬಿಟ್ಟಿದ್ದ.
ಕಳೆದ ಆಗಸ್ಟ್‌ನಲ್ಲಿ ಹೈದರಾಬಾದ್ ನಿವಾಸಿಯೊಬ್ಬರು ನಕಲಿ ಹೂಡಿಕೆ ಕಂಪನಿಯಿಂದ ತಾನು ಮೋಸ ಹೋದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಗರ ಸೈಬರ್ ಅಪರಾಧ ಪೊಲೀಸರು ತನಿಖೆ ಪ್ರಾರಂಭಿಸಿ, ಹಣ ಸ್ವೀಕರಿಸಿದ ಖಾತೆಯನ್ನು ವಡೋದರಾದಲ್ಲಿ ಮೊದಲು ಪತ್ತೆ ಹಚ್ಚಿದ್ದಾರೆ. ವಿಚಾರಣೆಯಲ್ಲಿ ಹಣವನ್ನು ರಿಷಿಗೆ ಹಸ್ತಾಂತರಿಸಿರುವುದು ಗೊತ್ತಾಗಿದೆ. ಆತನ ಮನೆಯಲ್ಲಿ ಎರಡು ದಿನಗಳ ಕಾಲ ನಡೆದ ವಿಚಾರಣೆಯ ನಂತರ, ಪೊಲೀಸರು ರಿಷಿಯನ್ನು ಅರೆಸ್ಟ್ ಮಾಡಿದ್ದಾರೆ. ಆರಂಭದಲ್ಲಿ ತಾನು ಯಾವುದೇ ತಪ್ಪು ಮಾಡಿಲ್ಲ ಎಂದೇ ರಿಷಿ ವಾದಿಸಿದ್ದಾನೆ. ನಂತರ ನಿರಾಕರಿಸಲಾಗದ ಪುರಾವೆಗಳನ್ನೇ ತಂದು ಪೊಲೀಸರು ತೋರಿಸಿದಾಗ ಆತನಿಗೆ ತಪ್ಪೊಪ್ಪಿಕೊಳ್ಳದೆ ಬೇರೆ ವಿಧಿ ಇರಲಿಲ್ಲ.
ಮಗನ ಮೋಸದ ವಹಿವಾಟು ತಾಯಿಯನ್ನು ಜರ್ಜರಿತಗೊಳಿಸಿದೆ. ಸಾಕಷ್ಟು ಬುದ್ಧಿವಾದ ಹೇಳಿದರೂ ಮಗ ತನ್ನ ಮಾರ್ಗಗಳನ್ನು ಬದಲಾಯಿಸಲು ನಿರಾಕರಿಸಿ, ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ. ವೇಗದ ಹಣ ಗಳಿಕೆಗಾಗಿ ತಪ್ಪು ದಾರಿ ಹಿಡಿದು ತನ್ನ ಬದುಕನ್ನೇ ಕೈಯ್ಯಾರೆ ನಾಶಪಡಿಸಿಕೊಂಡ ಯುವಕನ ಕಥೆ ಇದು.
Content compiled and formatted by The Headline World editorial team.





