ನವದೆಹಲಿ:ಸುಪ್ರೀಂ ಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರು ನವೆಂಬರ್ 23ರಂದು ನಿವೃತ್ತರಾಗಲಿದ್ದು, ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನು ನೇಮಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಕುರಿತು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ. ಸಾಮಾನ್ಯವಾಗಿ ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುತ್ತಾರೆ.
ಹಾಲಿ ಸಿಜೆಐ 65 ವರ್ಷ ತಲುಪಿದ ನಂತರ ನಿವೃತ್ತರಾಗುವ ಒಂದು ತಿಂಗಳಿಗೆ ಮುನ್ನ ಮುಂದಿನ ಸಿಜೆಐ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಕಳುಹಿಸುತ್ತಾರೆ. ನ್ಯಾ. ಸೂರ್ಯ ಕಾಂತ್ ಅವರು ಹಾಲಿ ಸಿಜೆಐ ನಂತರ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಹಾಗಾಗಿ, ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮುಂದಿನ ಮುಖ್ಯಸ್ಥರಾಗುವ ಸ್ಥಾನದಲ್ಲಿದ್ದಾರೆ. 15 ತಿಂಗಳು ಸಿಜೆಐ ಆಗಿ ಕಾರ್ಯಾವಧಿ:1962ರ ಫೆಬ್ರವರಿ 10ರಂದು ಹರಿಯಾಣದ ಹಿಸ್ಸಾರ್ ಜಿಲ್ಲೆಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸೂರ್ಯ ಕಾಂತ್ ಅವರು ಮೇ 24, 2019ರಂದು ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕವಾಗಿದ್ದರು.
ಸಿಜೆಐ ಆಗಿ ನೇಮಕವಾದಲ್ಲಿ 2027ರ ಫೆಬ್ರವರಿ 9ರಂದು ನಿವೃತ್ತಿಯಾಗುವವರೆಗೆ ಇವರು ಸುಮಾರು 15 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ. ಐತಿಹಾಸಿಕ ತೀರ್ಪುಗಳು: ನ್ಯಾ. ಸೂರ್ಯ ಕಾಂತ್ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 370ನೇ ವಿಧಿ ರದ್ದತಿ, ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಭ್ರಷ್ಟಾಚಾರ, ಪರಿಸರ ಮತ್ತು ಲಿಂಗ ಸಮಾನತೆಯ ಕುರಿತಾಗಿ ಇವರು ಐತಿಹಾಸಿಕ ತೀರ್ಪು ನೀಡಿದ್ದರು. ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನನ್ನು ಸ್ಥಗಿತಗೊಳಿಸಿದ ಐತಿಹಾಸಿಕ ನ್ಯಾಯಪೀಠದ ಭಾಗವಾಗಿದ್ದರು.
ಕೇಂದ್ರ ಸರ್ಕಾರದ ಪರಿಶೀಲನೆಯವರೆಗೆ ಅದರಡಿಯಲ್ಲಿ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸಬಾರದು ಎಂದು ತಮ್ಮ ತೀರ್ಪಿತ್ತಿದ್ದರು. ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗಾಗಿ ಬಿಹಾರದಲ್ಲಿ 65 ಲಕ್ಷ ಮತದಾರರ ವಿವರಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದರು. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ದೇಶದ ಇತರೆ ಬಾರ್ ಅಸೋಸಿಯೇಷನ್‌ಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ನಿರ್ದೇಶಿಸುವ ತೀರ್ಪಿನ ಮೂಲಕ ಇತಿಹಾಸ ನಿರ್ಮಿಸಿದ್ದರು. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿಯ ವೇಳೆ ನಡೆದ ಭದ್ರತಾ ಲೋಪದ ತನಿಖೆಗಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾ. ಇಂದು ಮಲ್ಹೋತ್ರಾ ನೇತೃತ್ವದ ಐವರು ಸದಸ್ಯರ ಸಮಿತಿಯಲ್ಲಿ ನ್ಯಾ.
ಸೂರ್ಯಕಾಂತ್ ಇದ್ದರು. ರಕ್ಷಣಾ ಪಡೆಗಳಿಗೆ ಒನ್ ರ್ಯಾಂಕ್-ಒನ್ ಪೆನ್ಷನ್ (OROP) ಯೋಜನೆಯನ್ನು ಇವರು ಎತ್ತಿಹಿಡಿದಿದ್ದರು. ಇದು ಸಾಂವಿಧಾನಿಕವಾಗಿ ಮಾನ್ಯ ಎಂದು ತೀರ್ಪಿತ್ತಿದ್ದರು. 1967ರ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ತೀರ್ಪು ರದ್ದುಗೊಳಿಸಿದ ಏಳು ನ್ಯಾಯಾಧೀಶರ ಪೀಠದಲ್ಲೂ ನ್ಯಾ. ಕಾಂತ್ ಇದ್ದರು.
ಇದು ಮುಂದೆ, ಸಂಸ್ಥೆಯ ಅಲ್ಪಸಂಖ್ಯಾತ ಸ್ಥಾನಮಾನದ ಮರುಪರಿಶೀಲನೆಗೆ ದಾರಿ ಮಾಡಿಕೊಟ್ಟಿತು. ಅಷ್ಟೇ ಅಲ್ಲದೇ, ಕಾನೂನುಬಾಹಿರ ಕಣ್ಗಾವಲು ಆರೋಪಗಳನ್ನು ತನಿಖೆ ಮಾಡಲು ಸೈಬರ್ ತಜ್ಞರ ಸಮಿತಿ ನೇಮಿಸಿದ ಪೆಗಾಸಸ್ ಸ್ಪೈವೇರ್ ಪ್ರಕರಣದ ವಿಚಾರಣೆ ನಡೆಸಿದ ಪೀಠದ ಭಾಗವಾಗಿದ್ದರು.








