ಮೈಸೂರು:ಸಿದ್ದರಾಮಯ್ಯನವರ ಸಿಎಂ ಸ್ಥಾನ ಅಸ್ತವ್ಯಸ್ತವಾದಾಗ, ಆ ಸ್ಥಾನವನ್ನು ದಲಿತರಿಗೆ ಕೊಡಿ ಎಂದು ಉರಿಲಿಂಗಪೆದ್ದಿ ಮಠದ ಅಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ, ಇನ್ನೂ ಅದು ಈಡೇರಿಲ್ಲ. ಒಂದು ವೇಳೆ ಸಿದ್ದರಾಮಯ್ಯ ಅವರ ಸಿಎಂ ಸ್ಥಾನ ಅಸ್ತವ್ಯಸ್ತವಾದರೆ, ದಲಿತ ವ್ಯಕ್ತಿಗೆ ಸಿಎಂ ಸ್ಥಾನ ಕೊಡಿ ಎಂದು ಒತ್ತಾಯಿಸಿದರು. ಭಾಷಣದ ವಿಡಿಯೋ ಕತ್ತರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್:ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೇಲೆ ವಕೀಲನೊಬ್ಬ ವಸ್ತುವೊಂದನ್ನು ಎಸೆಯಲು ಯತ್ನಿಸಿದ ಘಟನೆ ಖಂಡಿಸಿ ಯಾದಗಿರಿಯಲ್ಲಿ ನಡೆದ ಪ್ರತಿಭಟನಾ ರ‍್ಯಾಲಿ ವೇಳೆ ತಮ್ಮ ಮಾತನ್ನು ಕತ್ತರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದಕ್ಕೆ ಇದೇ ವೇಳೆ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ವಕೀಲರ ಮೇಲೆ, ನ್ಯಾಯಾಧೀಶರ ಮೇಲೆ ಅವಮಾನಕಾರಿಯಾದ ಘಟನೆಗಳು ನಡೆದಾಗ ಅದನ್ನು ಖಂಡಿಸಿ ನಾವು ಪ್ರತಿಭಟನೆ ಮಾಡುತ್ತೇವೆ. ಆದರೆ, ಪ್ರತಿಭಟನೆ ವೇಳೆ ಮಾತನಾಡಿದ ವಿಡಿಯೋ ಕತ್ತರಿಸಿ, ಕೆಟ್ಟ ಸಂದೇಶಗಳನ್ನು ಸಮಾಜಕ್ಕೆ ರವಾನಿಸುವುದು ಎಷ್ಟು ಸರಿ?, ಒಂದು ವೇಳೆ ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸಿ ಕ್ಷಮೆ ಕೇಳುವೆ ಎಂದು ತಿಳಿಸಿದರು. ನ್ಯಾಯಾಧೀಶರು, ವಕೀಲರನ್ನು ಅಪಮಾನಿಸುವ ಮನಸ್ಥಿತಿ ತಮ್ಮದಲ್ಲ:ಸಂವಿಧಾನಕ್ಕಿಂತ ಸನಾತನ ಧರ್ಮವೇ ದೊಡ್ಡದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಅವಮಾನಿಸಿದ ವಕೀಲ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಇನ್ನೂ ಕ್ಷಮೆಯಾಚಿಸಿಲ್ಲ. ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ. ಹೀಗಿದ್ದರೂ ನ್ಯಾಯಪೀಠಕ್ಕೆ ಅಪಮಾನ ಮಾಡಿದವರು ಇನ್ನೂ ಕ್ಷಮೆಯಾಚಿಸದಿರುವುದು ಬೇಸರದ ಸಂಗತಿಯಾಗಿದೆ.
ಈ ನೋವಿನಲ್ಲಿ ತಾವು ಮಾತನಾಡಿದ್ದು, ಅದರ ಪೂರ್ಣ ಭಾಗದ ಬದಲು ಕೆಲ ವಿಡಿಯೋ ತುಣುಕನ್ನು ಕತ್ತರಿಸಿ ವೈರಲ್ ಮಾಡಲಾಗಿದೆ. ನ್ಯಾಯಮೂರ್ತಿಗಳನ್ನು ಮತ್ತು ವಕೀಲರನ್ನು ಅಪಮಾನಿಸುವ ಮನಸ್ಥಿತಿ ತಮ್ಮದಲ್ಲ. ಸಂವಿಧಾನಕ್ಕೆ, ನ್ಯಾಯಾಧೀಶರು ಮತ್ತು ವಕೀಲರಿಗೆ ಅಪಮಾನವಾಗುವ ಘಟನೆ ನಡೆದಾಗ ಮೊದಲು ವಿರೋಧಿಸುವವರೇ ನಾವು ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು. ಸ್ವಾಮೀಜಿಯವರು ಯಾರನ್ನೂ ನಿಂದಿಸಿಲ್ಲ: ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಸ್ವಾಮೀಜಿಯವರು ತಪ್ಪು ಮಾಡಿದವರ ವಿರುದ್ಧ ಮಾತ್ರ ಮಾತನಾಡಿದ್ದಾರೆ. ಅವರು ಯಾರನ್ನೂ ನಿಂದಿಸಿಲ್ಲ ಎಂದು ತಿಳಿಸಿದರು.
ಆರ್ಎಸ್ಎಸ್ ನೋಂದಣಿ ಆಗಿರದಿದ್ದರೂ ಅದಕ್ಕೆ 100 ವರ್ಷ ತುಂಬಿದ ಸಂದರ್ಭದಲ್ಲಿ ಪಥ ಸಂಚಲನಕ್ಕೆ ಅವಕಾಶ ನೀಡಬೇಕೆಂದು ಕೇಳುತ್ತಿದ್ದಾರೆ. ತಮ್ಮ ಸಂಸ್ಥೆ ನೋಂದಣಿಯಾಗಿದ್ದರೂ ಮಹಿಷನಿಗೆ ಪುಷ್ಪಾರ್ಚನೆ ಮಾಡಬೇಕೆಂದರೂ ಅವಕಾಶ ನೀಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸಮರ್ಥ, ಹಿರಿಯ, ಪರಿಸ್ಥಿತಿ ನಿಭಾಯಿಸುವ ದಲಿತ ನಾಯಕರೊಬ್ಬರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬುದು ತಮ್ಮ ನಿರೀಕ್ಷೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.








