ಮೆಗ್ಗಾನ್ ಭೋಧನಾಸ್ಪತ್ರೆಯಲ್ಲಿ ಇ- ಫಾರ್ಮಸಿ ಅಳವಡಿಕೆ: ಔಷಧಗಳ ವಿತರಣೆಗೆ ಸಹಕಾರಿ, ಗೊಂದಲಗಳಿಗಿಲ್ಲ ಆಸ್ಪದ!

ಮೆಗ್ಗಾನ್ ಭೋಧನಾಸ್ಪತ್ರೆಯಲ್ಲಿ ಇ- ಫಾರ್ಮಸಿ ಅಳವಡಿಕೆ: ಔಷಧಗಳ ವಿತರಣೆಗೆ ಸಹಕಾರಿ, ಗೊಂದಲಗಳಿಗಿಲ್ಲ ಆಸ್ಪದ!
By Published : October 23, 2025 at 8:11 PM IST | Updated : October 23, 2025 at 9:24 PM IST

ವರದಿ:ಕಿರಣ್ ಕುಮಾರ್. ಎಸ್. ಈ. ಶಿವಮೊಗ್ಗ:ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೆಗ್ಗಾನ್ ಭೋದಾನಾಸ್ಪತ್ರೆಯನ್ನು ಮಧ್ಯ ಕರ್ನಾಟಕದ ಸಂಜೀವಿನಿ ಎಂದು ಕರೆಯಲಾಗುತ್ತಿದೆ. ಈ ಭೋಧನಾಸ್ಪತ್ರೆಯಲ್ಲಿ ಹೊಸದಾಗಿ ಇ- ಫಾರ್ಮಸ್ಸಿ ಜಾರಿಗೆ ತರಲಾಗಿದೆ.

ಇದರಿಂದ ಆಸ್ಪತ್ರೆಯಲ್ಲಿನ ಔಷಧಗಳ ಸೋರಿಕೆ, ಹೊರ ರೋಗಿಗಳಿಗೆ ಹೊರಗಡೆ ಔಷಧಗಳನ್ನು ಬರೆದುಕೊಡುವುದಕ್ಕೆ ತಡೆ ಹಾಕಿದಂತೆ ಆಗಿದೆ. ಅಲ್ಲದೇ ಹೊರ ರೋಗಿಗಳಿಗೆ ಸುಲಭವಾಗಿ ಔಷಧ ಲಭ್ಯವಾಗುವಂತೆ ಮಾಡಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಭೋಧನಾಸ್ಪತ್ರೆಯಲ್ಲಿ ನಿತ್ಯ ಎರಡೂವರೆ ಸಾವಿರಕ್ಕೂ ಅಧಿಕ ಹೊರ ರೋಗಿಗಳು ಬರುತ್ತಾರೆ. ಇಲ್ಲಿಗೆ ಶಿವಮೊಗ್ಗ ಸೇರಿದಂತೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಶಿರಸಿ, ಸಿದ್ದಾಪುರ, ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.

ಪುರ, ತರಿಕೆರೆ, ಕಡೂರು, ಬಿರೂರಿನಿಂದ ಸಾರ್ವಜನಿಕರು ಹೊರ ರೋಗಿಗಳಾಗಿ ಇಲ್ಲಿಗೆ ಆಗಮಿಸುತ್ತಾರೆ. ಇವರಿಗೆ ಎಲ್ಲ ರೀತಿಯ ಆಸ್ಪತ್ರೆ ಸೌಲಭ್ಯದ ಜೊತೆಗೆ ಔಷಧವು ಸಹ ಲಭ್ಯವಾಗಬೇಕೆಂದು ಇ- ಫಾರ್ಮಸಿಯನ್ನು ಅಳವಡಿಸಲಾಗಿದೆ. ಇ-ಫಾರ್ಮಸ್ಸಿ ಹೇಗೆ ಕಾರ್ಯನಿರ್ವಹಿಸುತ್ತದೆ?:ಇ- ಫಾರ್ಮಸಿ ಆಸ್ಪತ್ರೆಯ ಆಂತರಿಕ ತಂತ್ರಾಂಶವಾಗಿದೆ. ಇದು ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಆದರೆ, ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಇದು ಮೊದಲ ಬಾರಿಗೆ ಜಾರಿ ಮಾಡಲಾಗಿದೆ.

ಇದು ಆಸ್ಪತ್ರೆಯಲ್ಲಿನ ಎಲ್ಲ ಔಷಧಗಳು ಲಭ್ಯ ಇರುವ ಬಗ್ಗೆ ವೈದ್ಯರಿಗೆ ತಿಳಿಸುತ್ತದೆ. ಅಂದರೆ ಒಬ್ಬ ಹೊರ ರೋಗಿ ಒಪಿಡಿಯಲ್ಲಿ ಚೀಟಿ ಮಾಡಿಸಿಕೊಂಡು ವೈದ್ಯರ ಬಳಿ ಹೋದಾಗ, ಅಲ್ಲಿ ವೈದ್ಯರು ಹೊರ ರೋಗಿಯನ್ನು ಪರೀಕ್ಷಿಸಿ, ಅವರಿಗೆ ಅನುಗುಣವಾದ ಔಷಧ ನೀಡುತ್ತಾರೆ. ಮೊದಲು ಚೀಟಿಯಲ್ಲಿ ಔಷಧಗಳ ವಿವರವನ್ನು ಬರೆದು ನೀಡಬೇಕಿತ್ತು. ಈಗ ವೈದ್ಯರು ಹೊರ ರೋಗಿಗೆ ಔಷಧವನ್ನು ನೀಡಲು ತಮ್ಮಲ್ಲಿನ ಕಂಪ್ಯೂಟರ್ ಒಪನ್ ಮಾಡಿದಾಗ​ ಅಲ್ಲಿ ಹೊರ ರೋಗಿಯ ವಿವರ ಲಭ್ಯವಾಗುತ್ತದೆ. ನಂತರ ರೋಗಿಗೆ ಯಾವ ಔಷಧ ನೀಡಬಹುದು ಎಂದು ಪರಿಶೀಲಿಸಿ, ರೋಗಕ್ಕೆ ಅನುಗುಣವಾದ ಔಷಧಗಳು ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲ ವಿವರಗಳನ್ನು ಪರಿಶೀಲಿಸುವ ವೈದ್ಯರು, ರೋಗಿಗೆ ಯಾವ ಔಷಧ ನೀಡಬೇಕೆಂದು ನಿರ್ಧರಿಸಿ, ಅದನ್ನು ತಮ್ಮ ಕಂಪ್ಯೂಟರ್ ನಲ್ಲಿ ಎಂಟ್ರಿ ಮಾಡುತ್ತಾರೆ. ಇದು ಸಿದಾ ಫಾರ್ಮಸಿಯವರ ಕಂಪ್ಯೂಟರ್ ಗೆ ಹೋಗುತ್ತದೆ. ಅಲ್ಲಿ ವೈದ್ಯರಿಗೆ ತೋರಿಸಿಕೊಂಡು ಹೋದ ಹೊರ ರೋಗಿಯು ಔಷಧ ವಿತರಣಾ ಕೇಂದ್ರಕ್ಕೆ ಹೋಗಿ ಚೀಟಿ ನೀಡಿದಾಗ ಅವರು ಬಾರ್ ಕೋಡ್ ನೋಡಿ ಅಲ್ಲಿ ವೈದ್ಯರು ಸೂಚಿಸಿರುವ ಔಷಧಗಳನ್ನು ರೋಗಿಗೆ ನೀಡುತ್ತಾರೆ. ಇದರಿಂದ ವೈದ್ಯರು ಚೀಟಿ ಬರೆದು ಕೊಡುವ ಸಮಯ ಉಳಿತಾಯವಾಗುತ್ತದೆ. ಕೆಲವೊಮ್ಮೆ ವೈದ್ಯರು ಬರೆದುಕೊಟ್ಟ ಔಷಧ ಯಾವುದೆಂದು ತಿಳಿಯದೇ ಹೊರ ರೋಗಿಗಳು ಮತ್ತೆ ವೈದ್ಯರನ್ನು ಭೇಟಿಯಾಗುವ ಕಿರಿಕಿರಿಯೂ ತಪ್ಪುತ್ತದೆ.

ಔಷಧ ನೀಡುವ ಕೌಂಟರ್​ಗಳಲ್ಲೂ ಏರಿಕೆ:ಇ-ಫಾರ್ಮಸಿ ಜಾರಿಯಾದಾಗಿನಿಂದ ಔಷಧ ನೀಡುವ ಕೌಂಟರ್​ಗಳು 3 ರಿಂದ 5 ಕ್ಕೆ ಏರಿಕೆಯಾಗಿದೆ. ಔಷಧ ಪಡೆಯುವವರು ಔಷಧ ವಿತರಣೆ ಮಾಡುವ ಕೌಂಟರ್ ನಲ್ಲಿ 10-15 ನಿಮಿಷಗಳಲ್ಲಿ ಔಷಧ ಪಡೆದುಕೊಂಡು ಹೋಗಬಹುದು. ‌ ಮುಂದೆ ಕಂಪ್ಯೂಟರ್ ಹಾಗೂ ತಂತ್ರಾಂಶ ವೇಗವಾದರೆ ಸಾರ್ವನಿಕರಿಗೆ ಬೇಗನೇ ಸೌಲಭ್ಯ ಲಭ್ಯವಾಗುತ್ತದೆ‌. ಇ- ಫಾರ್ಮಸಿಯಿಂದ ಆಸ್ಪತ್ರೆಗೆ ಬೇಕಾದ ಔಷಧಗಳ ಮಾಹಿತಿ ವೈಧ್ಯಾಧಿಕಾರಿಗಳಿಗೆ ಲಭ್ಯವಾಗುತ್ತದೆ. ಇ ಫಾರ್ಮಸಿ ಬಗ್ಗೆ ಮೆಗ್ಗಾನ ಆಸ್ಪತ್ರೆ ವೈದ್ಯಾಧಿಕಾರಿ ಹೇಳುವುದೇನು?:ಇ- ಪಾರ್ಮಸ್ಸಿ ಬಗ್ಗೆ ಮೆಗ್ಗಾನ್ ಭೋಧಾನಾಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ.

ತಿಮ್ಮಪ್ಪ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಇ- ಫಾರ್ಮಸಿಯನ್ನು ಅಳವಡಿಸಿಕೊಳ್ಳಲಾಗಿದೆ. ಇದು ಹೊರ ರೋಗಿಗಳನ್ನು ಪರೀಕ್ಷಿಸುವ ವೈದ್ಯರ ರೂಂನಲ್ಲಿ ಕಂಪ್ಯೂಟರ್​ಗಳಿಗೆ ಕಾಣಸಿಗುತ್ತದೆ. ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ಲಭ್ಯ ಇರುವ ಔಷಧಗಳು ಅವರ ಕಂಪ್ಯೂಟರ್​ ಪರದೆಯಲ್ಲಿ ಕಾಣಿಸಿಕೊಳ್ಳುತ್ತವೆ. ಇಲ್ಲಿ ವೈದ್ಯರು ರೋಗಿಗಳಿಗೆ ಬೇಕಾದ ಔಷಧಗಳನ್ನು ಗುರುತಿಸಿ ಇಟ್ಟುಕೊಳ್ಳಬಹುದು. ಹೀಗೆ ಗುರುತು ಮಾಡಿ ರೋಗಿಗಳಿಗೆ ನೀಡಿದ ಔಷಧಗಳು, ಔಷಧ ವಿತರಣಾ ಕೊಠಡಿಗೆ ರವಾನೆಯಾಗುತ್ತದೆ.

ವೈದ್ಯರ ತಪಾಸಣೆ ಬಳಿಕ ಫಾರ್ಮಸಿ ಹತ್ತಿರ ಹೋಗುವ ರೋಗಿಗಳಿಗೆ ಲಭ್ಯವಾಗುತ್ತವೆ. ಇದರಿಂದ ಆಸ್ಪತ್ರೆಯಲ್ಲಿ ಪ್ರತಿ ಔಷಧಕ್ಕೂ ಲೆಕ್ಕ ಸಿಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಯಾವೆಲ್ಲ ಔಷಧಗಳ ಲಭ್ಯತೆ ಇದೆ ಎಂಬುದು ಸಹ ಗೊತ್ತಾಗುತ್ತದೆ. ಅಲ್ಲದೇ ಔಷಧಗಳ ಅವಧಿ ಮುಗಿದಿದ್ದರ ಬಗ್ಗೆ ಹಾಗೂ ಅದರ ಕಾಲಾವಧಿ ಎಷ್ಟಿದೆ ಎಂಬುದನ್ನು ಸಹ ಕಂಪ್ಯೂಟರ್​ ನಲ್ಲಿಯೇ ಚಕ್​ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಇ ಫಾರ್ಮಸಿಗೆ ಬಂದ ಹೊಸದಾದ ಔಷಧಯನ್ನು ನೀಲಿ ಬಣ್ಣದಿಂದ ಗುರುತಿಸಲಾಗಿರುತ್ತದೆ.

ಇನ್ನೂ ಕಾಲಾವಧಿ ಇದ್ರೆ ಅದನ್ನು ಹಳದಿ ಬಣ್ಣದಿಂದ ಗುರುತಿಸಲಾಗುತ್ತದೆ. ಔಷಧದ ಕಾಲಾವಧಿ ಮುಗಿದಿದ್ದರೆ ಅದು ಕೆಂಪು ಬಣ್ಣಕ್ಕೆ ಬರುತ್ತದೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಒಟ್ಟು ಎಷ್ಟು ಔಷಧ ಇದೆ ಎಂದೂ ತಿಳಿದು ಬರುತ್ತದೆ. ಇದರಿಂದ ಔಷಧಗಳ ದುರುಪಯೋಗ, ಕಳುವಾಗುವುದಾಗಲಿ ಆಗುವುದಿಲ್ಲ ಎಂದು ಡಾ. ತಿಮ್ಮಪ್ಪ ವಿವರಿಸಿದರು.

ಮೊದಲು ರೋಗಿಗಳು ಇ- ಫಾರ್ಮಸಿಯಿಂದ ಕೆಲಕಾಲ ತುಸು ತೊಂದರೆಗೆ ಒಳಗಾಗಿದ್ದರು. ಆದರೆ ಈಗ ಎಲ್ಲಾ ಸರಿಯಾಗುತ್ತಿದೆ. ಹೊಸದರಲ್ಲಿ ಎಲ್ಲವೂ ಸಮಸ್ಯೆ ಎನಿಸುತ್ತದೆ. ನಂತರ ಅದು ಸರಿ ಆಗುತ್ತದೆ. ಇದಕ್ಕಾಗಿ ವೈದ್ಯರಿಗೆ ಫಾರ್ಮಸಿಸ್ಟ್​ಗಳಿಗೆ ತರಬೇತಿ ನೀಡಲಾಗಿದೆ.

ಇದರಿಂದ ಮುಂದೆ ಎಲ್ಲರಿಗೂ ಉತ್ತಮವಾದ ವೈದ್ಯಕೀಯ ವ್ಯವಸ್ಥೆ ಸಿಗಲಿದೆ ಎಂದು ಮೆಗ್ಗಾನ್ ಭೋಧಾನಾಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್​ ಡಾ. ತಿಮ್ಮಪ್ಪ ಹೇಳಿದ್ದಾರೆ. ಇವುಗಳನ್ನು ಓದಿ:.

📚 Related News