ರಾಂಚಿ: ದೆಹಲಿ ಪೊಲೀಸ್ ವಿಶೇಷ ಘಟಕದ ಸಹಯೋಗದೊಂದಿಗೆ ಜಾರ್ಖಂಡ್ ಭಯೋತ್ಪಾದಕ ವಿರೋಧಿ ಪಡೆ (ಎಟಿಎಸ್) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಐಎಸ್ಐಎಸ್ (ಐಸಿಸ್) ಉಗ್ರರನ್ನು ರಾಂಚಿಯ ಲಾಡ್ಜ್‌ನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋವರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಇಸ್ಲಾಂ ನಗರದ ತಬಾರಕ್ ಲಾಡ್ಜ್‌ನಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆಶರ್ ಡ್ಯಾನಿಶ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಬೊಕಾರೊ ಜಿಲ್ಲೆಯ ಪೆಟ್ವಾರ್ ನಿವಾಸಿ ಎಂದು ತಿಳಿದು ಬಂದಿದ್ದು, ಬಹುಕಾಲದಿಂದ ಲಾಡ್ಜ್‌ನಲ್ಲಿ ವಾಸಿಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಯ ಕುರಿತು ನಿಖರ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕ ಜಾರ್ಖಂಡ್ ಎಟಿಎಸ್ ಜೊತೆಗೂಡಿ ಲಾಡ್ಜ್ ಮೇಲೆ ದಾಳಿ ಮಾಡಿತ್ತು. ಈ ಕಾರ್ಯಾಚರಣೆಯಲ್ಲಿ ಆಶರ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಈತನ ಕೋಣೆಯಲ್ಲಿದ್ದ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಶರ್ ಐಎಸ್ಐಎಸ್ ಮಾಡ್ಯೂಲ್‌ನೊಂದಿಗೆ ಸಂಪರ್ಕದಲ್ಲಿದ್ದು, ಇತರೆ ಅನೇಕ ಅನುಮಾನಾಸ್ಪದ ಕಾರ್ಯಾಚರಣೆಗಳಲ್ಲಿ ಈತನ ಸಂಪರ್ಕವಿರುವ ಕುರಿತು ಅನುಮಾನವಿದೆ. ಈತ ದೆಹಲಿಯಲ್ಲಿ ದಾಖಲಾದ ಪ್ರಕರಣದಲ್ಲೂ ಬೇಕಾಗಿದ್ದ. ಈತನ ಬಳಿ ಇದ್ದ ಅನೇಕ ಸಾಧನಗಳನ್ನು ವಶಕ್ಕೆ ಪಡೆಯಲಾಗಿದ್ದು, ಜಾಲದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸ್ ವಿಶೇಷ ಘಟಕ ಆಶರ್‌ನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದುಕೊಂಡು ಹೋಗಿದೆ. ಜಾರ್ಖಂಡ್ ಅಥವಾ ದೇಶದ ಇತರೆ ಭಾಗದಲ್ಲಿ ಏನಾದರೂ ವಿಧ್ವಂಸಕ ಕೃತ್ಯಕ್ಕೆ ಯೋಜನೆ ನಡೆದಿತ್ತಾ ಎಂಬ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಈತನ ಕುರಿತು ಹೆಚ್ಚಿನ ಮಾಹಿತಿಗೆ ಲಾಡ್ಜ್ ಸಿಬ್ಬಂದಿಯನ್ನು ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಿದ ಎಟಿಎಸ್: ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಎಟಿಎಸ್ ಇಬ್ಬರನ್ನು ಬಂಧಿಸಿದೆ. ಅಮ್ರೋಹಾ ಜಿಲ್ಲೆಯ ನೌಗಂವಾ ಸದರ್ ಪ್ರದೇಶದ ಅಜ್ಮಲ್ ಮತ್ತು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡಾ.ಉಸಾಮಾ ಮಜ್ ಶೇಖ್ ಬಂಧಿತರು. ಇವರು ರಿವೈವಿಂಗ್ ಇಸ್ಲಾಂ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಈ ಗುಂಪಿನಲ್ಲಿ ಮೂವರು ಅಡ್ಮಿನ್‌ಗಳು ಹಾಗೂ 400 ಪಾಕಿಸ್ತಾನಿಗಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ರಾಷ್ಟ್ರವಿರೋಧಿ ಮತ್ತು ಮೂಲಭೂತವಾದಿ ಸಿದ್ಧಾಂತದ ಪ್ರಚಾರ ಮಾಡುತ್ತಿದ್ದರು. ವಿಚಾರಣೆ ವೇಳೆ, ತಾವು ಭಾರತ ವಿರೋಧಿ ವಿಚಾರಗಳನ್ನು ಪ್ರಚಾರ ಮಾಡುವ ಗುಂಪಿನ ಸದಸ್ಯರಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾನು ಹಲವು ಪಾಕಿಸ್ತಾನಿಗಳ ಜೊತೆಗೆ ಸಂಪರ್ಕದಲ್ಲಿರುವುದಾಗಿ ಅಜ್ಮಲ್ ತನಿಖಾಧಿಕಾರಿಗಳ ಮುಂದೆ ತಿಳಿಸಿದ್ದು, ಥಾಣೆಯ ಶೇಖ್ ಈತನ ಸಹಚರ. ಈತನೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಹೊಂದಿದ್ದಾಗಿ ತಿಳಿಸಿದ್ದಾನೆ. ಶೇಖ್ ಕೂಡ ಭಾರತ ವಿರೋಧಿ ಕಮೆಂಟ್ಗಳನ್ನು ಇನ್ಸ್ಟಾಗ್ರಾಂ ಮತ್ತು ಸಿಗ್ನಲ್ ಆ್ಯಪ್ನಲ್ಲಿ ಪೋಸ್ಟ್ ಮಾಡುತ್ತಿದ್ದ.
ಅಜ್ಮಲ್ನನ್ನು ಈ ಮೊದಲೇ ಬಂಧಿಸಿದ್ದು, ಆಗಸ್ಟ್ 1ರಂದು ತನಿಖೆಯ ಬಳಿಕ ಎಟಿಎಸ್ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಡಾ.ಶೇಖ್ನನ್ನು ಮಹಾರಾಷ್ಟ್ರದ ಗ್ರಾಮದಿಂದ ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.