SA vs PAK, Test:ಎರಡು ಪಂದ್ಯಗಳ ಕ್ರಿಕೆಟ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್‌ಗಳ ಸೋಲನುಭವಿಸಿತು. ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿಣ ಪಡೆಯನ್ನು ಬಲೆಗೆ ಬೀಳಿಸಲು ಸ್ಪಿನ್ ಟ್ರ್ಯಾಕ್ ಸಿದ್ಧಪಡಿಸಿದ್ದ ಪಾಕ್, ತಾನೇ ಆ ಬಲೆಯೊಳಗೆ ಸಿಲುಕಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 333 ರನ್ ಗಳಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 404 ರನ್ ಪೇರಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕ್ ಕೇವಲ 138 ರನ್‌ಗಳಿಗೆ ಆಲೌಟ್ ಆಯಿತು.
ನಾಲ್ಕನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ 68 ರನ್‌ಗಳ ಅಲ್ಪಮೊತ್ತದ ಗುರಿ ನೀಡಿತು. ಇದನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 2 ವಿಕೆಟ್ ಕಳೆದುಕೊಂಡು ಸುಲಭ ಗೆಲುವು ಸಾಧಿಸಿತು. 6 ವಿಕೆಟ್ ಪಡೆದ ಸೈಮನ್ ಹಾರ್ಮರ್: ಸ್ಪಿನ್ನರ್ ಸೈಮನ್ ಹಾರ್ಮರ್ ಟೆಸ್ಟ್‌ನಲ್ಲಿ ತಮ್ಮ ಮೊದಲ 5 ವಿಕೆಟ್ ಗೊಂಚಲು ಪಡೆದರು. 50ಕ್ಕೆ 6 ವಿಕೆಟ್ ಪಡೆಯುವ ಮೂಲಕ ಅವರು ದ. ಆಫ್ರಿಕಾದ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು.
ಈ ಗೆಲುವಿನೊಂದಿಗೆ ದ. ಆಫ್ರಿಕಾ ತಂಡ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ಸರಣಿಯ ಮೊದಲ ಪಂದ್ಯ ಗೆಲ್ಲುವ ಮೂಲಕ ಪಾಕಿಸ್ತಾನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿತ್ತು. ಇದೀಗ ಈ ಸೋಲಿನೊಂದಿಗೆ ಮತ್ತೆ ಕುಸಿದಿದೆ. ಪ್ರಸ್ತುತ ಪಾಕಿಸ್ತಾನ 2 ಪಂದ್ಯಗಳನ್ನು ಆಡಿ 1 ಗೆಲುವು ಮತ್ತು 1 ಸೋಲು ಕಂಡಿದ್ದು 50 ಶೇಕಡಾವಾರು ಮತ್ತು 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ದ. ಆಫ್ರಿಕಾ ತಂಡ 2 ಪಂದ್ಯಗಳಿಂದ 1 ಗೆಲುವು ಮತ್ತು 1 ಸೋಲು ಮತ್ತು 50 ಶೇಕಡಾವಾರುಗಳೊಂದಿಗೆ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 36 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ 16 ಅಂಕಗಳೊಂದಿಗೆ ಎರಡನೇ ಸ್ಥಾನ, ಭಾರತ 25 ಅಂಕಗಳೊಂದಿಗೆ ಮತ್ತು 61. 90 ಶೇಕಡಾವಾರುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಗೆಲುವು ಇದಾಗಿದೆ.
2ನೇ ಟೆಸ್ಟ್‌ನಲ್ಲಿ ದ. ಆಫ್ರಿಕಾದ ಹಾರ್ಮರ್ ಮತ್ತು ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಪ್ರಮುಖ ಪಾತ್ರ ವಹಿಸಿದರು. ಪಾಕಿಸ್ತಾನವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 138 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಇಬ್ಬರೂ 17 ವಿಕೆಟ್‌ಗಳನ್ನು ಹಂಚಿಕೊಂಡರು. ಸೈಮನ್ ಹಾರ್ಮರ್ 20 ಓವರ್‌ಗಳಲ್ಲಿ 50 ರನ್‌ಗಳಿಗೆ 6 ವಿಕೆಟ್ ಪಡೆದರು. ಇದರಲ್ಲಿ 5 ಮೇಡನ್ ಓವರ್‌ಗಳು ಸೇರಿವೆ.
ಇನ್ನು 68 ರನ್‌ಗಳ ಗುರಿ ಬೆನ್ನಟ್ಟಿದ ದ. ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ ಭರ್ಜರಿ ಪ್ರದರ್ಶನ ನೀಡಿದರು. ಅವರು ಪಾಕಿಸ್ತಾನಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಆದರೆ 42 ರನ್‌ಗಳಿಸಿದ್ದ ವೇಳೆ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಗೆಲುವಿಗೆ ನಾಲ್ಕು ರನ್ ಬೇಕಾಗಿತ್ತು.
ಈ ವೇಳೆ ಟ್ರಿಸ್ಟಾನ್ ಸ್ಟಬ್ಸ್ ಡಕ್ ಔಟಾದರು. ನಂತರ ಬಂದ ರಯಾನ್ ರಿಕಲ್ಟನ್ ಅದ್ಭುತ ಸಿಕ್ಸ್‌ನೊಂದಿಗೆ ಜಯ ತಂದುಕೊಟ್ಟರು. ಅಷ್ಟೇ ಅಲ್ಲದೇ 25 ರನ್‌ಗಳೊಂದಿಗೆ ಅಜೇಯರಾಗುಳಿದರು.








