ಬೆಂಗಳೂರು: ಕೇರ್ ಟೇಕರ್ ಆಗಿ ಬಂದವಳ ಹೆಸರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಬರೆದಿಟ್ಟು ಮಗಳಂತೆ ನೋಡಿಕೊಂಡರೂ ಮಾಲೀಕರ ಮನೆಗೇ ಕನ್ನ ಹಾಕಿದ ಯುವತಿ ಇದೀಗ ಜೈಲು ಪಾಲಾಗಿದ್ದಾಳೆ. ಮಂಗಳಾ (32) ಬಂಧಿತ ಆರೋಪಿ. ಪಾರ್ಟಿ, ಬಾಯ್‌ಫ್ರೆಂಡ್, ಆನ್‌ಲೈನ್ ಬೆಟ್ಟಿಂಗ್ ಸಹವಾಸದಿಂದ ಚಿನ್ನ ಕಳ್ಳತನ ಮಾಡಿದ್ದ ಈಕೆಯನ್ನು ಜೆ. ಪಿ. ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜೆ. ಪಿ. ನಗರದ 2ನೇ ಹಂತದಲ್ಲಿ ವಾಸವಿದ್ದ ಆಶಾ ಜಾಧವ್ ಎಂಬವರು ತಮ್ಮ ತಾಯಿಯನ್ನು ನೋಡಿಕೊಳ್ಳಲು 15 ವರ್ಷದ ಹಿಂದೆ ಮಂಗಳಾ ಎಂಬಾಕೆಯನ್ನು ಕೇರ್ ಟೇಕರ್ ಆಗಿ ನೇಮಿಸಿಕೊಂಡಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದ ಆಶಾ ಅವರ ತಾಯಿಯನ್ನು ಮಂಗಳಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. 58 ವರ್ಷ ವಯಸ್ಸಿನ ಆಶಾ ಜಾಧವ್ ಅವರ ಪತಿ ಮೃತಪಟ್ಟಿದ್ದು, ದಂಪತಿಗೆ ಮಕ್ಕಳಿಲ್ಲ.
ಜೆ. ಪಿ ನಗರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ಆಶಾ ಜಾಧವ್, ಮಂಗಳಾ ಅವರನ್ನೇ ತಮ್ಮ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಒಂದೂವರೆ ಕೋಟಿ ರೂ. ಮೌಲ್ಯದ ಮನೆಯನ್ನು ಮಂಗಳಾ ಹೆಸರಿಗೆ ಬರೆದಿದ್ದರು. ಮಂಗಳಾ ಹುಟ್ಟುಹಬ್ಬವನ್ನು ವಿದೇಶಕ್ಕೆ ಕರೆದೊಯ್ದು ಅದ್ಧೂರಿಯಾಗಿ ಆಚರಿಸುತ್ತಿದ್ದರು.
ಅಲ್ಲದೆ ಒಳ್ಳೆಯ ಹುಡುಗನನ್ನು ನೋಡಿ ತಾನೇ ಮದುವೆ ಮಾಡಿಸುವ ಯೋಜನೆಯನ್ನೂ ಹೊಂದಿದ್ದರು. ಕೆಲ ವರ್ಷಗಳ ಹಿಂದೆ ಆಶಾ ಜಾಧವ್ ಅವರ ತಾಯಿ ಮೃತಪಟ್ಟ ಬಳಿಕ ಇರುವ ಆಸ್ತಿಯನ್ನು ತಾವು ತಾನೇ ಏನು ಮಾಡಬೇಕೆಂದು ಮಂಗಳಾ ಹೆಸರಿಗೇ ಬರೆದಿದ್ದರು. ಆದರೆ ಆನ್‌ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ ಮಂಗಳಾ, ಬಾಯ್‌ಫ್ರೆಂಡ್ ಜೊತೆ ಪಾರ್ಟಿ, ಪಬ್ ಅಂತ ಸುತ್ತಾಡುತ್ತಾ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದಳು. ಇಷ್ಟಾದರೂ ಸಹ ಮಂಗಳಾ ಮಾಡಿಕೊಂಡಿದ್ದ 40 ಲಕ್ಷ ರೂ.
ಸಾಲವನ್ನು ಆಶಾ ಜಾಧವ್ ಅವರೇ ತೀರಿಸಿದ್ದರು. ಅಲ್ಲದೇ ಐದು ಕೋಟಿ ರೂ. ಮೌಲ್ಯದ ವಾಸದ ಮನೆಯನ್ನೂ ಸಹ ಮಂಗಳಾಳ ಹೆಸರಿಗೆ ಬರೆದಿದ್ದರು. ಇತ್ತ ಆನ್‌ಲೈನ್ ಬೆಟ್ಟಿಂಗ್ ಸಹವಾಸ ಬಿಡದ ಮಂಗಳಾ ತನ್ನ ಹೆಸರಿಗೆ ಬರೆದಿದ್ದ ಮನೆಯನ್ನೂ ಮಾರಿ ಹಣ ಕಳೆದುಕೊಂಡಿದ್ದಳು. ಆದರೂ ಸಹ ಆಕೆಯನ್ನು ಜೊತೆಯಲ್ಲಿಟ್ಟುಕೊಂಡು ಆಶಾ ಜಾಧವ್ ಅವರೇ ಸಾಕುತ್ತಿದ್ದರು.
ಆದರೆ ಆನ್‌ಲೈನ್ ಬೆಟ್ಟಿಂಗ್ ಮುಂದುವರೆಸಿದ್ದ ಮಂಗಳಾ ಮನೆಯಲ್ಲಿದ್ದ ಚಿನ್ನಾಭರಣ ಕದ್ದು, ಬೀರುವಿನ ಕೀಯನ್ನು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು. ಕೀ ಕಳೆದಿರಬಹುದು ಎಂದು ಕೆಲ ದಿನಗಳ ಕಾಲ ಸುಮ್ಮನಿದ್ದ ಆಶಾ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಡೂಪ್ಲಿಕೇಟ್ ಕೀ ಮೂಲಕ ಬೀರು ತೆಗೆಸಿದಾಗ 450 ಗ್ರಾಂ ಚಿನ್ನ ಹಾಗೂ 3 ಕೆ. ಜಿ ಬೆಳ್ಳಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಮನೆಯಲ್ಲಿ ಯಾರೋ ಅಪರಿಚಿತರು ಕಳ್ಳತನ ಮಾಡಿರಬಹುದೆಂದು ಜೆ. ಪಿ.
ನಗರ ಠಾಣೆಗೆ ಆಶಾ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮಂಗಳಾಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಅದನ್ನೂ ಸಹ ಅಲ್ಲಗಳೆದಿದ್ದ ಆಶಾ, ಆಕೆಯ ಮೇಲೆ ಅನುಮಾನ ಪಡಬೇಡಿ, ಆಕೆ ಅಂಥವಳಲ್ಲ ಎಂದಿದ್ದರು. ಆದರೆ ಪೊಲೀಸರು ತಾಂತ್ರಿಕ ಅಂಶಗಳನ್ನು ಆಧರಿಸಿ ತನಿಖೆ ಕೈಗೊಂಡು ಮಂಗಳಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಬಂಧಿತಳಿಂದ 450 ಗ್ರಾಂ ಚಿನ್ನ ಹಾಗೂ 3 ಕೆ.
ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








