ಮೈಸೂರು:ನಂಜನಗೂಡು ತಾಲೂಕಿನ ಹೆಡಿಯಾಲ ವಲಯದ ಅಂಜನಾಪುರ ಬಳಿ ಕಾಣಿಸಿಕೊಂಡಿದ್ದ 8 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಮಂಗಳವಾರ ರಾತ್ರಿ ಸೆರೆ ಹಿಡಿದಿದ್ದಾರೆ. ಸೆರೆಯಾಗಿರುವ ಹುಲಿಯು ಭಾನುವಾರ ರೈತನನ್ನು ಕೊಂದಿದ್ದ ಹುಲಿಯೋ ಅಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು, ಬುಧವಾರ ತಿಳಿದು ಬರಲಿದೆ ಎಂದು ಹೆಡಿಯಾಲ ಉಪವಿಭಾಗದ ಎಸಿಎಫ್ ಪರಮೇಶ್ ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆ ವೇಳೆಗೆ ಸಮೀಪದ ಈರೇ ಗೌಡನ ಹುಂಡಿ ಬಳಿ ಸತೀಶ್ ಎಂಬವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ರೈತರು ನೀಡಿದ ಮಾಹಿತಿ ಆಧರಿಸಿ, ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಶೋಧ ಆರಂಭಿಸಿದರು. ಇದೇ ವೇಳೆ ಡ್ರೋನ್ ಕ್ಯಾಮೆರಾದಲ್ಲಿ ಹುಲಿ ಚಲನವಲನ ಪತ್ತೆಯಾದ ಬಳಿಕ ರೋಹಿತ್, ಭೀಮ ಆನೆಗಳನ್ನು ಬಳಸಿ ಕಾರ್ಯಾಚರಣೆ ಪ್ರಾರಂಭಿಸಿದ್ದರು.
ಹನುಮಂತನಗರದ ಬಳಿ ಹುಲಿ ಸಂಚರಿಸಿರುವ ಮಾಹಿತಿ ತಿಳಿದು ಅಲ್ಲಿಗೆ ತೆರಳಿದ ಡಾ. ರಮೇಶ್, ಡಾ. ವಸೀಂ ಮಿರ್ಜಾ ಅವರು ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಸೆರೆ ಸಿಕ್ಕ ಹುಲಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ವನ್ಯಜೀವಿಗಳ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹುಲಿಯು ಯಾವುದೇ ಗಾಯವಿಲ್ಲದೇ ಆರೋಗ್ಯದಿಂದ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಶಾಸಕ ದರ್ಶನ್ ಧ್ರುವನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶೀಘ್ರವಾಗಿ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹುಲಿ ದಾಳಿಗೆ ರೈತ ಬಲಿ:ತಾಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಭಾನುವಾರ ಟೊಮೆಟೊ ಬಿಡಿಸಿ ಊಟಕ್ಕೆ ಹೋಗುತ್ತಿದ್ದ ರಾಜಶೇಖರ ಅವರ ಮೇಲೆ ಹುಲಿ ದಾಳಿ ಮಾಡಿತ್ತು. ಪರಿಣಾಮ ರೈತ ಮೃತಪಟ್ಟಿದ್ದರು. ಬಲಿ ಪಡೆದ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಸಚಿವರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿವ ಖಂಡ್ರೆ ಅವರು ಕೂಡ ಹುಲಿ ಸೆರೆಗೆ ಸೂಚನೆ ನೀಡಿದ್ದರು.
ಅಂತೆಯೇ ಸಾಕಾನೆಗಳ ಮೂಲಕ ಅರಣ್ಯ ಸಿಬ್ಬಂದಿ ಕೂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ರೈತನ ಬಲಿ ಪಡೆದ ಹುಲಿಯೇ ಸದ್ಯ ಸೆರೆ ಸಿಕ್ಕಿದೆಯಾ ಎಂಬುದು ಇನ್ನೂ ದೃಢಪಟ್ಟಿಲ್ಲ. ವೈರಲ್ ಚಿತ್ರದ ಬಗ್ಗೆ ಸ್ಪಷ್ಟನೆ: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿರುವ 3 ಮರಿಗಳೊಂದಿಗೆ ಹುಲಿ ಇರುವ ಚಿತ್ರವು ನುಗು ವಲಯಕ್ಕೆ ಸಂಬಂಧಿಸಿದ್ದಲ್ಲ ಎಂದು ಹೆಡಿಯಾಲ ಉಪ ವಿಭಾಗದ ಎಸಿಎಫ್ ಡಿ. ಪರಮೇಶ್ ಸ್ಪಷ್ಟಪಡಿಸಿದ್ದಾರೆ. ಅರಣ್ಯ ಇಲಾಖೆಯು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದು, ಹುಲಿ ಚಲನವಲನಗಳ ಬಗ್ಗೆ ಅತೀ ಸೂಕ್ಷ್ಮವಾಗಿ ನಿಗಾವಹಿಸಿದೆ.
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಬೆಣ್ಣೆಗೆರೆ ಗ್ರಾಮದಲ್ಲಿ 3 ಹುಲಿ ಮರಿಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಸಂದೇಶವನ್ನು ಭಿತ್ತರಿಸುತ್ತಿರುವುದು ಅಪರಾಧ. ಇದರಿಂದ ಸಾರ್ವಜನಿಕರು ಭಯಭೀತರಾಗದೇ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಸಹಕರಿಸಬೇಕು. ಸುಳ್ಳು ಸಂದೇಶಗಳನ್ನು ಭಿತ್ತರಿಸುವ ವಿರುದ್ಧ ಇಲಾಖೆ ನಿಯಮಾನುಸಾರ ಕ್ರಮವಹಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








