Ind vs Aus 2nd ODI:ಭಾರತ - ಆಸ್ಟ್ರೆಲಿಯಾ ನಡುವಣ ಎರಡನೇ ಏಕದಿನ ಪಂದ್ಯ ಇಂದು ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ಕಳಪೆ ಆರಂಭ ಪಡೆದುಕೊಂಡಿದೆ. 17 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಆರಂಭಿಕರಾಗಿ ಬಂದ ನಾಯಕ ಶುಭಮನ್ ಗಿಲ್ ಅವರು ರೋಹಿತ್ ಜೊತೆಗೂಡಿ ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದರು. ಆದರೆ, ಇದಕ್ಕೆ ಆಸೀಸ್ ಬೌಲರ್ಗಳು ಅವಕಾಶ ನೀಡಲಿಲ್ಲ.
ಗಿಲ್ ಅವರನ್ನು 9 ರನ್‌ಗಳಿಗೆ ಪೆವಿಲಿಯನ್ ಸೇರಿಸಿದರು. ಜೇವಿಯರ್ ಬಾರ್ಟ್ಲೆಟ್ ಎಸೆದ 6ನೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಭಾರತಕ್ಕೆ ಆಘಾತ ನೀಡಿದ್ದಾರೆ. ಗಿಲ್ ಬೌಂಡರಿ ಬಾರಿಸುವ ಯತ್ನದಲ್ಲಿ ಕ್ಯಾಔಟ್ ಆಗಿ ಪೆವಿಲಿಯನ್ ಸೇರಿದರೇ ನಂತರ ಬಂದ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ದಾಖಲೆ ಹೊಂದಿರುವ ಕೊಹ್ಲಿ ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ.
ಬ್ಯಾಟಿಂಗ್ಗೆ ಆಗಮಿಸಿದ ಕೆಲವೇ ನಿಮಿಷದಲ್ಲಿ ಕೊಹ್ಲಿ ಪೆವಿಲಿಯನ್ ಸೇರಿದ್ದಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಕೊಹ್ಲಿ 4 ಎಸೆತಗಳನ್ನು ಎದುರಿಸಿ ಜೇವಿಯರ್ ಎಸೆದ 6ನೇ ಓವರ್ನ 5ನೇ ಎಸೆತದಲ್ಲಿ LBW ಆಗಿ ಪೆವಿಲಿಯನ್ಗೆ ಮರಳಿದ್ದಾರೆ. ಇದು ಕೊಹ್ಲಿಯ ಸತತ ಎರಡನೇ ಡಕೌಟ್ ಆಗಿದೆ. ಮೊದಲ ಪಂದ್ಯದಲ್ಲೂ ಭಾರೀ ನಿರೀಕ್ಷೆಗಳೊಂದಿಗೆ ಕಣಕ್ಕಿಳಿದಿದ್ದ ಕೊಹ್ಲಿ ಖಾತೆ ತೆರೆಯುವಲ್ಲಿ ವಿಫಲರಾಗಿದ್ದರು. ಏಕದಿನ ವೃತ್ತಿ ಜೀವನದಲ್ಲಿ ಇದೇ ಮೊದಲು:304 ಪಂದ್ಯಗಳ ಏಕದಿನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ದಾರೆ.
ಇದಕ್ಕೂ ಮೊದಲು 2021 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಟೆಸ್ಟ್ ಮತ್ತು ಟಿ-20ಐನಲ್ಲಿ ಸತತ ಡಕ್ ಔಟ್ ಆಗಿದ್ದರು. ಅಲ್ಲದೇ ಆಸ್ಟ್ರೇಲಿಯಾದಲ್ಲಿ ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಶೂನ್ಯಕ್ಕೆ ಔಟಾಗಿರುವುದು ಇದು ಎರಡನೇ ಬಾರಿ ಒಟ್ಟಾರೆ (ಎಲ್ಲಾ ಸ್ವರೂಪ) ನಾಲ್ಕನೇ ಡಕೌಟ್ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 40ನೇ ಡಕ್ ಆಗಿದೆ. ಈ ಪಟ್ಟಿಯಲ್ಲಿ ಜಹೀರ್ ಖಾನ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಎಲ್ಲಾ ಸ್ವರೂಪಗಳಲ್ಲಿ 43 ಬಾರಿ ಡಕೌಟ್ ಆಗಿದ್ದಾರೆ.
ಅಡಿಲೇಡ್ನಲ್ಲಿ ಮೊದಲ ಡಕ್: ಅಡಲೇಡ್ನಲ್ಲಿ ಕೊಹ್ಲಿ ಇದೇ ಮೊದಲ ಬಾರಿಗೆ ಡಕೌಟ್ ಆಗಿದ್ದಾರೆ. ಐದು ಶತಕಗಳು ಸೇರಿದಂತೆ ಎಲ್ಲ ಮಾದರಿಗಳಲ್ಲಿ 975 ರನ್ ಗಳಿಸಿರುವ ಅವರು ಈ ಮೈದಾನದಲ್ಲಿ ಇನ್ನೂ ಅತ್ಯಂತ ಯಶಸ್ವಿ ಪ್ರವಾಸಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆದರೆ, 1000 ರನ್ ಗಡಿ ತಲುಪಲು ಮಾತ್ರ ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು ಕಳೆದ ಭಾನುವಾರ ಪರ್ತ್‌ನಲ್ಲಿ ನಡೆದ ಸರಣಿಯ ಉದ್ಘಾಟನಾ ಪಂದ್ಯದಲ್ಲೂ ಕೊಹ್ಲಿ ಡಕೌಟ್ ಆಗಿದ್ದರು. ಮಿಚೆಲ್ ಸ್ಟಾರ್ಕ್ ಅವರು ಆಫ್ ಸ್ಟಂಪ್ನಲ್ಲಿ ಬೌಲಿಂಗ್ ಮಾಡಿದ್ದರು.
ಈ ವೇಳೆ, ಕೊಹ್ಲಿ ಡ್ರೈವ್ ಮಾಡಲು ಯತ್ನಿಸಿದ್ದರು. ಆದರೆ, ಚೆಂಡು ಬ್ಯಾಕ್‌ವರ್ಡ್ ಪಾಯಿಂಟ್ ಕಡೆ ಸಾಗಿತ್ತು ಈ ವೇಳೆ, ಅಲ್ಲಿದ್ದ ಕೂಪರ್ ಕಾನೊಲಿ ಕ್ಯಾಚ್ ಪಡೆದುಕೊಂಡ್ಡಿದ್ದರು.








