ಮಹಿಳಾ ವಿಶ್ವಕಪ್​!: ಇಂದಿನ IND vs AUS ಪಂದ್ಯ ಮಳೆಯಿಂದ ರದ್ದಾದರೇ ಮುಂದೇನು?

ಮಹಿಳಾ ವಿಶ್ವಕಪ್​!: ಇಂದಿನ IND vs AUS ಪಂದ್ಯ ಮಳೆಯಿಂದ ರದ್ದಾದರೇ ಮುಂದೇನು?
By Published : October 30, 2025 at 2:20 PM IST

INDW vs AUSW Semi Final:ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನ​ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಹೈವೋಲ್ಟೇಜ್​ ​ ಪಂದ್ಯಕ್ಕೆ ನವಿ ಮುಂಬೈನ D. Y. ಪಾಟೀಲ್ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ. ಫೈನಲ್​ಗೆ ತಲುಪಿ ಚೊಚ್ಚಲ ವಿಶ್ವಕಪ್​ ಗೆಲ್ಲುವ ನಿರೀಕ್ಷೆಯಲ್ಲಿರವ ಭಾರತದ ವನಿತೆಯರು ಇಂದಿನ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಬೇಕು ಎಂದು ಪಣತೊಟ್ಟಿದ್ದಾರೆ.

ಆದರೆ ಇಂದಿನ ಈ ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವ ಆತಂಕ ಎದುರಾಗಿದೆ. ಹವಾಮಾನ ವರದಿಗಳ ಪ್ರಕಾರ ಸೆಮಿಫೈನಲ್ ಪಂದ್ಯದ ಸಮಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇಂದಿನ ಪಂದ್ಯ ಮಳೆಯಿಂದಾಗಿ ರದ್ದಾದರೆ ಮುಂದಿರುವ ಆಯ್ಕೆಗಳೇನು? ಭಾರತ- ಆಸ್ಟ್ರೇಲಿಯಾ ಯಾವ ತಂಡ ಫೈನಲ್​ಗೆ ತಲುಪುತ್ತದೆ? ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡಲಾರಂಭಿಸಿವೆ. ಇದಕ್ಕೆ ಉತ್ತರ ಈ ಲೇಖನದಲ್ಲಿ ತಿಳಿಯಿರಿ. ಹವಾಮಾನ ವರದಿ ಏನು ಹೇಳುತ್ತದೆ?:ಇಲಾಖೆಯ ಪ್ರಕಾರ, ಇಂದು ನವಿ ಮುಂಬೈನಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ತಾಪಮಾನವು 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಮಳೆಯಾಗುವ ಶೇ. 20 ರಷ್ಟು ಮಳೆ ಬೀಳುವ ಸಾಧ್ಯತೆ ಇದೆ. ಅದಾಗ್ಯೂ ಸಂಜೆ ವೇಳೆಗೆ ಇದು ಶೇ. 4ಕ್ಕೆ ಇಳಿಯಲಿದೆ ಎಂದು ತಿಳಿಸಿದೆ. ಹಾಗಾಗಿ ಇಂದಿನ ಪಂದ್ಯಕ್ಕೆ ಮಳೆಯ ಆತಂಕ ಕಡಿಮೆ ಇರಲಿದೆ.

ಪಂದ್ಯ ರದ್ದಾದರೇ ಮುಂದೇನು?:ಒಂದು ವೇಳೆ, ನವಿ ಮುಂಬೈನಲ್ಲಿ ಇಂದು ಮಳೆಯಿಂದ ಪಂದ್ಯವನ್ನು ಮುಂದುವರೆಸುವುದು ಕಷ್ಟವಾದಲ್ಲಿ ಮೀಸಲು ದಿನದಂದು ನಡೆಸಲಾಗುತ್ತದೆ. ಅಕ್ಟೋಬರ್ 31 ಅನ್ನು ಈ ಪಂದ್ಯಕ್ಕೆ ಮೀಸಲು ದಿನವಾಗಿ ಇರಿಸಲಾಗಿದೆ. ಈ ಪಂದ್ಯಕ್ಕೂ ಮಳೆ ಅಡಿ ಪಡಿಸಿ ಯಾವುದೇ ಫಲಿತಾಂಶ ಬರದಿದ್ದರೆ, ಆಗ ಆಸ್ಟ್ರೇಲಿಯಾ ನೇರವಾಗಿ ಫೈನಲ್ ತಲುಪುತ್ತದೆ. ಏಕೆಂದರೆ ಟೂರ್ನಿಯಲ್ಲಿ ಭಾರತಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಹಿನ್ನೆಲೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸದಂತೆ ಫ್ಯಾನ್ಸ್​ಗಳು ಪ್ರಾರ್ಥಿಸುತ್ತಿದ್ದಾರೆ.

ಸೆಮಿಸ್​ ಮುಖಾಮುಖಿ ದಾಖಲೆ:ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಹಿಂದೆ ಎರಡು ಬಾರಿ ಮಾತ್ರ ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. 1997ರ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ, 2017ರಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್​ಗೆ ತಲುಪಿತ್ತು. ಈ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ 171 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಬಾರಿಯೂ ಫ್ಯಾನ್ಸ್​ ಹರ್ಮನ್‌ಪ್ರೀತ್ ಕೌರ್ ಅವರಿಂದ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸುತ್ತಿದ್ದಾರೆ. ತಂಡಗಳು - ಭಾರತ:ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉ.

ನಾಯಕಿ), ಶಫಾಲಿ ವರ್ಮಾ, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್​ ಕೀಪರ್​), ಕ್ರಾಂತಿ ಗೌಡ್, ಅಮಂಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಯಸ್ತಿಕಾ ಬಾಟಿಯ ಮತ್ತು ಸ್ನೇಹ ರಾಣಾ. ಆಸ್ಟ್ರೇಲಿಯಾ: ಅಲಿಸಾ ಹೀಲಿ (ನಾಯಕಿ/ ವಿಕೆಟ್ ಕೀಪರ್), ಎಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಫೋಬೆ ಲಿಚ್‌ಫೀಲ್ಡ್, ಅನ್ನಾಬೆಲ್ ಸದರ್ಲ್ಯಾಂಡ್, ಆಶ್ ಗಾರ್ಡ್ನರ್, ಜಾರ್ಜಿಯಾ ವೇರ್‌ಹ್ಯಾಮ್, ಹೀದರ್ ಗ್ರಹಾಂ, ತಾಹ್ಲಿ ಮೆಕ್‌ಗ್ರಾತ್, ಬೆತ್ ಮೂನಿ (ವಿಕೆಟ್ ಕೀಪರ್), ಅಲಾನಾ ಕಿಂಗ್, ಡಾರ್ಸಿ ಬ್ರೌನ್, ಕಿಮ್ ಗಾರ್ತ್, ಮೇಗನ್ ಶುಟ್, ಸೋಫಿ ಮೊಲಿನ್ಯೂಕ್ಸ್.

📚 Related News