ಕನ್ನಡದಿಂದ ವೃತ್ತಿಜೀವನ ಆರಂಭಿಸಿ ಸದ್ಯ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಟಾರ್ಡಮ್ ಹೊಂದಿರುವ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಬಾಲಿವುಡ್ ಚಿತ್ರ 'ಥಾಮಾ' ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಸ್ಟಾರ್ ಆಯುಷ್ಮಾನ್ ಖುರಾನಾ ಪ್ರಮುಖ ಪಾತ್ರದಲ್ಲಿರುವ ಸಿನಿಮಾ ದೀಪಾವಳಿ ಸಂದರ್ಭ ಅಕ್ಟೋಬರ್ 21ರಂದು ಚಿತ್ರಮಂದಿರಗಳಿಗೆ ಎಂಟ್ರಿಕೊಟ್ಟಿತ್ತು. ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್‌ನ ಐದನೇ ಸಿನಿಮಾ 'ಥಾಮಾ' ತನ್ನ ಮೊದಲ ವಾರವನ್ನು ಭರ್ಜರಿಯಾಗಿ ಪೂರ್ಣಗೊಳಿಸಿದೆ. ಆದಿತ್ಯ ಸರ್ಪೋತ್‌ದಾರ್ ನಿರ್ದೇಶನದ ಈ ಚಿತ್ರ ಸಕಾರಾತ್ಮಕ ವಿಮರ್ಶೆ ಸ್ವೀಕರಿಸಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ 7 ದಿನಗಳಲ್ಲಿ ಭಾರತದಲ್ಲಿ 95.
55 ಕೋಟಿ ರೂ. ನಿವ್ವಳ ಮತ್ತು ವಿಶ್ವದಾದ್ಯಂತ 124. 5 ಕೋಟಿ ರೂ. ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಗುಡ್ ಬೈ ಮೂಲಕ 2022ರಲ್ಲಿ ಬಾಲಿವುಡ್ ಪ್ರವೇಶಿಸಿದ ಸೌತ್ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ, ಮಿಷನ್ ಮಜ್ನು, ಅನಿಮಲ್, ಛಾವಾ, ಸಿಕಂದರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಮತ್ತೊಂದು ಬಾಲಿವುಡ್ ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಟ್ರೇಡ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಈ ಚಿತ್ರ ಸೋಮವಾರ ಸುಮಾರು 4. 25 ಕೋಟಿ ರೂ. ಗಳಿಸಿದೆ. 24 ಕೋಟಿ ರೂಪಾಯಿಯೊಂದಿಗೆ ಕಳೆದ ಮಂಗಳವಾರದಂದು ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಚಿತ್ರ, ನಂತರ ಬುಧವಾರದಂದು 18.
6 ಕೋಟಿ ರೂ. , ಗುರುವಾರ 13 ಕೋಟಿ ರೂ. ಮತ್ತು ಶುಕ್ರವಾರ 10 ಕೋಟಿ ರೂ. ಗಳಿಸಿತು. ವಾರಾಂತ್ಯದಲ್ಲಿ ಗಳಿಕೆಯಲ್ಲಿ ಏರಿಕೆ ಕಂಡುಬಂತು.
ಶನಿವಾರ 13. 1 ಕೋಟಿ ರೂ. ಮತ್ತು ಭಾನುವಾರ 12. 6 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ತನ್ನ ಮೊದಲ ಸೋಮವಾರ 4.
25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸ್ತ್ರೀ, ಭೇಡಿಯಾ ಮತ್ತು ಮುಂಜ್ಯಾ ದಂತಹ ಹಿಟ್ ಸಿನಿಮಾಗಳನ್ನು ಒಳಗೊಂಡಿರುವ ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್ (MHCU)ನ ಭಾಗವಾಗಿರುವ ಥಾಮಾ, ಜಾನಪದ, ಫ್ಯಾಂಟಸಿ ಮತ್ತು ಹಾಸ್ಯವನ್ನು ಒಳಗೊಂಡ "ರಕ್ತಸಿಕ್ತ ಪ್ರೇಮಕಥೆ". ಈ ಚಿತ್ರದ ಅಲೋಕ್ ಪಾತ್ರದಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ನಿಗೂಢ ತಡಕಾ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರಾಂತ್ಯದಲ್ಲಿ ಥಾಮಾ ಗಳಿಕೆಯಲ್ಲಿ ಗಮನಾರ್ಹ ಏರಿಕೆ ಕಂಡಿದ್ದು, ಇದು ಸಕಾರಾತ್ಮಕ ಬಾಯ್ಮಾತಿನ ಬಲವಾದ ಸಂಕೇತ ಎಂದು ವ್ಯಾಪಾರ ವಿಶ್ಲೇಷಕರು ತಿಳಿಸಿದ್ದಾರೆ.
ಚಿತ್ರವನ್ನು ಫ್ಯಾಮಿಲಿ ಆಡಿಯೆನ್ಸ್ ಸೇರಿದಂತೆ ಎಲ್ಲಾ ವಯಸ್ಸಿನ ಪ್ರೇಕ್ಷಕರು ಸ್ವೀಕರಿಸಿದ್ದಾರೆ. ಮ್ಯಾಡಾಕ್ ಫಿಲ್ಮ್ಸ್ ಈಗಾಗಲೇ ತನ್ನ ಮುಂದಿನ ಪ್ರಾಜೆಕ್ಟ್ 'ಶಕ್ತಿ ಶಾಲಿನಿ'ಯನ್ನು ಪ್ರಾರಂಭಿಸಿದೆ. ಇದನ್ನು ಅಮರ್ ಕೌಶಿಕ್ ನಿರ್ದೇಶಿಸುತ್ತಿದ್ದು, ಇತ್ತೀಚಿನ ಬ್ಲಾಕ್ಬಸ್ಟರ್ ಸೈಯ್ಯಾರಾ ಖ್ಯಾತಿಯ ನಟಿ ಅನೀತ್ ಪಡ್ಡಾ ಮುಖ್ಯಭೂಮಿಕೆಯಲ್ಲಿದ್ದಾರೆ. ಥಾಮಾ ನಾಯಕ ನಟ ಆಯುಷ್ಮಾನ್ ಖುರಾನಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ಅನೀತ್ ಪಡ್ಡಾ ಅವರನ್ನು 'ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್' ಕುಟುಂಬಕ್ಕೆ ಸ್ವಾಗತಿಸಿದರು. ಮತ್ತೋರ್ವ ಪಂಜಾಬಿ ತಮ್ಮ ಈ ತಂಡಕ್ಕೆ ಆಗಮಿಸುತ್ತಿರುವುದರ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು.
ಥಾಮಾ ಕಥೆ, ಬರವಣಿಗೆ, ಅಭಿನಯ ಮತ್ತು ತನ್ನ ನಿರೂಪಣಾ ಶೈಲಿಯೊಂದಿಗೆ ಗಮನ ಸೆಳೆಯುತ್ತಿದ್ದು, ಮುಂಬರುವ ದಿನಗಳಲ್ಲಿ 150 ಕೋಟಿ ರೂ. ಗಳನ್ನು ದಾಟಲಿದೆ ಅನ್ನೋದು ಸಿನಿಪಂಡಿತರ ಅಭಿಪ್ರಾಯ. ಈ ಗೆಲುವು ಆಯುಷ್ಮಾನ್ ಖುರಾನಾ ಅವರನ್ನು ಬಹುಬೇಡಿಕೆ ಮತ್ತು ಬಹುಮುಖ ತಾರೆಯಾಗಿ ಸ್ಥಾಪಿಸಿದೆ.








